ನವದೆಹಲಿ: ಗುರುಗ್ರಾಮ್ನಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕರ್ಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ಪೊಲೀಸರು ಮಂಗಳವಾರ ರಾಜಸ್ಥಾನದ ದೌಸಾದಲ್ಲಿ ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಲವ್ನೀಶ್ ಗುರ್ಜರ್ನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಲ್ಯಾಣ್ ವಿರುದ್ಧ ಕೊಲೆ ಯತ್ನದ ಆರೋಪ ದಾಖಲಿಸಲಾಗಿದ್ದು, ಈ ಅಪರಾಧಕ್ಕೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಗುರುಗ್ರಾಮ್ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಭಾನುವಾರ ಘಟನೆ ನಡೆದಿದೆ. ಬಿಳಿ ಬಣ್ಣದ ಸೆಡಾನ್ ಕಾರೊಂದು ಏಕಾಏಕಿ ಎಡಕ್ಕೆ ತಿರುಗಿ ಬೈಕ್ನಲ್ಲಿ ತೆರಳುತ್ತಿದ್ದ ಸಿಯಾ ಅವರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಸಿಯಾ ರಸ್ತೆಗೆ ಬಿದ್ದಿದ್ದು, ಅವರ ಏಪ್ರಿಲಿಯಾ ಆರ್ಎಸ್ 457 ಸ್ಪೋರ್ಟ್ಸ್ ಬೈಕ್ ರಸ್ತೆಯ ಮೇಲೆ ಬಿದ್ದು ಬಹುದೂರ ಉಜ್ಜಿಕೊಂಡು ಹೋಗಿತ್ತು.
ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ಇನ್ನು ಕಾರು ಚಾಲಕ ಕಲ್ಯಾಣ್ ವಿರುದ್ಧ ಸಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಬಳಿಕ ವೇಗವಾಗಿ ಪರಾರಿಯಾದರೆ ತನಗೆ ಏನೂ ಆಗುವುದಿಲ್ಲ ಎಂದು ಆತ ಭಾವಿಸಿದ್ದಾನೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಆರೋಪಿಗೆ ಕಠಿಣ ಶಿಕ್ಷೆಯಾಗುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸಿಯಾ ಅವರ ಪೋಷಕರು ತಿಳಿಸಿದ್ದಾರೆ.



