ಆನೇಕಲ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ಪತ್ನಿಯೊಂದಿಗೆ ಮಾತನಾಡಿರುವ ಆರೋಪ ಕೇಳಿಬಂದಿದೆ.
ಬೇರೆ ಖೈದಿ ಹೆಸರಿನಲ್ಲಿ ಮೊಬೈಲ್ ನಂಬರ್ ನೋಂದಾಯಿಸಿಕೊಂಡು, ವಕೀಲರ ನಂಬರ್ ಎಂದು ನಮೂದಿಸಿ ಪತ್ನಿಯೊಂದಿಗೆ ಮಾತನಾಡುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಿಗೆ ವಕೀಲರು ಹಾಗೂ ಕುಟುಂಬದವರೊಂದಿಗೆ ಮಾತನಾಡಲು ಮೂರು ನಂಬರ್ಗಳನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ನಂಬರ್ಗಳನ್ನು ಪರಿಶೀಲಿಸಿ ರಿಜಿಸ್ಟರ್ ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಜೈಲು ಸಿಬ್ಬಂದಿ ಮೌನೇಶ್ ಹೆಚ್. ಕೋರಿ ಅವರಿಗೆ ವಹಿಸಲಾಗಿತ್ತು.
ಆರೋಪಿ ಪ್ರದೋಷ್ ಬೇರೆ ಖೈದಿಯ ಹೆಸರಿನಲ್ಲಿ ನಂಬರ್ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಈ ನಂಬರ್ ಅನ್ನು ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಹಾಯ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ವಕೀಲರ ನಂಬರ್ ಎಂದು ನಮೂದಿಸಿದ್ದ ನಂಬರ್ನಿಂದ ಪ್ರದೋಷ್ ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದ ವಿಚಾರ ಇದೀಗ ಪತ್ತೆಯಾಗಿದೆ. ಈ ಮೂಲಕ ಜೈಲು ನಿಯಮಗಳನ್ನು ಉಲ್ಲಂಘಿಸಿ ಕರೆ ಮಾಡಿರುವ ಆರೋಪ ಎದುರಾಗಿದೆ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ಮೌನೇಶ್ ಹಾಗೂ ಆರೋಪಿ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



