ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ, ಕ್ರೀಡಾಸ್ಫೂರ್ತಿ ಹಾಗೂ ನಿರಂತರ ಪ್ರಯತ್ನವೇ ಮುಖ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಸಮೀಪದ ಒಡೆಯರ ಮಲ್ಲಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ನಡೆದ ಶಿಗ್ಲಿ ಗ್ರೂಪ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸುವುದರ ಜತೆಗೆ ನಾಯಕತ್ವ ಗುಣ, ಆತ್ಮವಿಶ್ವಾಸ, ಶಿಸ್ತು ಹಾಗೂ ತಂಡಭಾವ ಬೆಳೆಸುತ್ತವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ನೆಲೆಸಲು ಸಾಧ್ಯ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸ್ಥೈರ್ಯವೂ ವೃದ್ಧಿಯಾಗುತ್ತದೆ ಎಂದರು.
ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದಾಗ ಅಹಂಕಾರಪಡದೆ, ಸೋಲು ಎದುರಾದಾಗ ಕುಗ್ಗದೆ, ತಮ್ಮ ತಪ್ಪುಗಳನ್ನು ವಿಶ್ಲೇಷಿಸಿಕೊಂಡು ಮುಂದಿನ ಸಾಧನೆಗೆ ಸಿದ್ಧರಾಗಬೇಕು. ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ, ಸಹಕಾರ ಮನೋಭಾವ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಗ್ರಾಮೀಣ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಶಾಲೆಗಳು ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು ಎಂದು ಲಮಾಣಿ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗರಾಜ ಕಳಸಾಪುರ ಮಾತನಾಡಿ, ಕ್ರೀಡೆಯು ದೈಹಿಕ ಆರೋಗ್ಯದ ಜತೆಗೆ ಆತ್ಮವಿಶ್ವಾಸ, ಶಿಸ್ತು, ಸಮಯಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮೊಬೈಲ್, ಟಿವಿಯಂತಹ ಸಾಧನಗಳಿಗೆ ಹೆಚ್ಚು ಸಮಯ ಮೀಸಲಿಡುವ ಬದಲು ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.
ಬಿಆರ್‌ಸಿ ಎಸ್.ಕೆ. ಹವಾಲ್ದಾರ್, ಬಿ.ಎಂ. ಯರಗುಪ್ಪಿ, ಸಿಆರ್‌ಪಿ ಜ್ಯೋತಿ ಗಾಯಕವಾಡ, ಕೆ.ಆರ್. ಲಮಾಣಿ, ಎಚ್‌ಎಂ ಸಪ್ಪಿನ, ಗಂಗಾಧರ ಮೆಣಸಿನಕಾಯಿ, ಅಶೋಕ ಮೆಣಸಿನಕಾಯಿ, ಭೀಮಣ್ಣ ಯಂಗಾಡಿ ಉಪಸ್ಥಿತರಿದ್ದರು.
ಪ್ರವೀಣ ಗಾಯಕರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸಿದ್ದಣ್ಣ ಬೆಟಗೇರಿ ಪ್ರತಿಜ್ಞಾವಿಧಿ ಬೋಧಿಸಿದರು. ಅರ್ಜುನ ವಠಾರ ವಂದಿಸಿದರು. ರೂಪಾ ಮನ್ನಂಗಿ ನಿರೂಪಿಸಿದರು. ಒಡೆಯರ ಮಲ್ಲಾಪುರ, ಶಿಗ್ಲಿ ಹಾಗೂ ರಾಮಗೇರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕ್ರೀಡೆಯಲ್ಲಿ ಗೆಲುವು ಸಾಧಿಸಿದಾಗ ಅಹಂಕಾರಪಡದೆ, ಸೋಲಿನಿಂದ ಕುಗ್ಗದೆ ತಪ್ಪುಗಳನ್ನು ವಿಶ್ಲೇಷಿಸಿಕೊಂಡು ಮುಂದಿನ ಸಾಧನೆಗೆ ಸಿದ್ಧರಾಗಬೇಕು.
— ಡಾ. ಚಂದ್ರು ಲಮಾಣಿ, ಶಾಸಕ



