ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವದ ರಕ್ಷಣೆಗೆ ಮತದಾನದ ಹಕ್ಕು ಪ್ರಬಲ ಅಸ್ತ್ರವಾಗಿದೆ. ಮತದಾನದ ಹಕ್ಕು ಉಳಿದರೆ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ. ಸಂವಿಧಾನದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಂಗಳವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಂವಿಧಾನದ ಪೀಠಿಕೆಯ ಆಶಯದಂತೆ ಪ್ರತಿಯೊಬ್ಬರೂ ಬದುಕಬೇಕು. ಎಲ್ಲರಿಗೂ ಸಮಾನ ಅವಕಾಶ ಹಾಗೂ ಸ್ಥಾನಮಾನ ದೊರೆಯಬೇಕು. ಪ್ರಜಾಪ್ರಭುತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ದೇಶದಲ್ಲಿ ಬಡತನ ನಿರ್ಮೂಲನೆಗೆ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಾಮಾಜಿಕ ಸಮಾನತೆಗಾಗಿ ಇನ್ನಷ್ಟು ಪರಿಣಾಮಕಾರಿ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.
ಸರ್ಕಾರ ಜಗಜ್ಯೋತಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಬಸವಣ್ಣನವರ ಅನುಭವ ಮಂಟಪವನ್ನು ಮೊದಲ ಸಂಸತ್ತು ಎಂದು ಪರಿಗಣಿಸಬಹುದು. ಅನುಭವ ಮಂಟಪದ ಆಶಯಗಳು ಹಾಗೂ ಸಂವಿಧಾನದ ಮೌಲ್ಯಗಳಲ್ಲಿ ಸಾಮ್ಯತೆ ಕಾಣಬಹುದು. ಸಂವಿಧಾನದ ಆಶಯಗಳನ್ನು ಗೌರವಿಸಿ ಪಾಲಿಸುವುದರಿಂದಲೇ ದೇಶ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ಸಹಾಯಕ ಕಾನೂನು ನೆರವು ಅಭಿರಕ್ಷಕ ಗುರುರಾಜ ಗೌರಿ ಉಪನ್ಯಾಸ ನೀಡಿ, ಪ್ರಜಾಪ್ರಭುತ್ವ ಕೇವಲ ಆಡಳಿತ ವ್ಯವಸ್ಥೆಯಲ್ಲ; ಅದೊಂದು ಜೀವನ ವಿಧಾನವಾಗಿದೆ. ಪ್ರಜಾಪ್ರಭುತ್ವವನ್ನು ಕೇವಲ ಮೇಲ್ನೋಟಕ್ಕೆ ನೋಡುವುದಲ್ಲ, ಅದರ ಮೌಲ್ಯಗಳನ್ನು ಜೀವನದಲ್ಲಿ ಅನುಭವಿಸಿ ಅನುಸರಿಸಬೇಕು ಎಂದರು.
ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆಯಲ್ಲಿ ನೆಲ್ಸನ್ ಮಂಡೇಲಾ ಅವರ ಕೊಡುಗೆಯನ್ನು ಸ್ಮರಿಸಬೇಕು. ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಅದ್ಭುತ ಪ್ರತಿಭೆ ಹಾಗೂ ದೂರದೃಷ್ಟಿಯನ್ನು ಪ್ರತಿಯೊಬ್ಬರೂ ಅರಿಯಬೇಕು. ಸಂವಿಧಾನ ರಚನಾ ಚರ್ಚೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು. ಕಾನೂನುಗಳ ಸಮರ್ಪಕ ಅನುಷ್ಠಾನವಾಗಬೇಕು; ಅವುಗಳ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಷರೀಫ್ ಬಿಳಿಯಲಿ ಹಾಗೂ ಸಂಗಡಿಗರು ಸಂವಿಧಾನದ ಕುರಿತು ಗೀತೆಗಳನ್ನು ಪ್ರಸ್ತುತಪಡಿಸಿದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಆರ್ಡಿಪಿಆರ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ, ಎಸ್.ಎನ್. ಬಳ್ಳಾರಿ, ಆದಪ್ಪನವರ, ಬಸವರಾಜ ಕಡೆಮನಿ, ಆನಂದ ಸಿಂಗಾಡೆ, ಮಾರ್ತಾಂಡ ಹಾದಿಮನಿ, ಪ್ರೊ. ಕೆ.ಎಚ್. ಬೇಲೂರ ಸೇರಿದಂತೆ ಜಿಲ್ಲಾ ಜಾಗೃತ ಸಮಿತಿಯ ನಾಮನಿರ್ದೇಶಿತ ಸದಸ್ಯರು, ನಗರಸಭೆ ಸದಸ್ಯರು, ಸಫಾಯಿ ಕರ್ಮಚಾರಿ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ಹಾಗೂ ನಂದಿತಾ ಹಂಪಿಹೊಳಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಬಿಡಿಸಲಾಗಿದ್ದ ರಂಗೋಲಿ ಗಮನ ಸೆಳೆಯಿತು.
ಮತದಾನದ ಹಕ್ಕು ಉಳಿದರೆ ಮಾತ್ರ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ. ಸಂವಿಧಾನವನ್ನು ಗೌರವಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
— ಡಾ. ಎಚ್.ಕೆ. ಪಾಟೀಲ, ಶಾಸಕ



