ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಗುರುದೇವ್ಸ್ ಜೆಜಿ ಪಿಯು ಕಾಲೇಜಿನ ವಿದ್ಯಾರ್ಥಿ ರಿಯಾನ್ ಅಹಮದ್ ರಾಷ್ಟ್ರೀಯ ಮಟ್ಟದ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕೇರಳದ ತಿರುವನಂತಪುರದ ಇಂಟರ್ನ್ಯಾಷನಲ್ ಶೂಟಿಂಗ್ ಅಕಾಡೆಮಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಿದ್ದರು.
ಅತ್ಯುತ್ತಮ ಏಕಾಗ್ರತೆ, ನಿಖರತೆ ಹಾಗೂ ಆತ್ಮವಿಶ್ವಾಸದೊಂದಿಗೆ ಸ್ಪರ್ಧಿಸಿದ ರಿಯಾನ್ ಅಹಮದ್ ಅವರು ಜೂನಿಯರ್, ಯೂತ್ ಹಾಗೂ ಸಬ್-ಯೂತ್ ವಿಭಾಗಗಳಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದು ತ್ರಿವಳಿ ಚಿನ್ನದ ಸಾಧನೆ ಮಾಡಿದ್ದಾರೆ. ಜತೆಗೆ ಜನರಲ್ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿರುವುದು ರಿಯಾನ್ ಅವರ ಪ್ರತಿಭೆ, ಕಠಿಣ ಪರಿಶ್ರಮ ಹಾಗೂ ಶೂಟಿಂಗ್ ಕ್ರೀಡೆಯಲ್ಲಿನ ಬದ್ಧತೆಗೆ ಸಾಕ್ಷಿಯಾಗಿದೆ.
ರಿಯಾನ್ ಅವರ ಸಾಧನೆಗೆ ಗುರುದೇವ್ಸ್ ಜೆಜಿ ಪಿಯು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಯಶಸ್ಸು ಗಳಿಸಲಿ ಎಂದು ಹಾರೈಸಿದ್ದಾರೆ.



