ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಅಂದರೆ AI ತಂತ್ರಜ್ಞಾನವನ್ನು ಅಳವಡಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳ ಒಕ್ಕೂಟ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಪ್ರಾಥಮಿಕ ಹಾಗೂ ಶಾಲಾ ಹಂತದಲ್ಲೇ AI ಬಳಕೆಗೆ ಅವಕಾಶ ನೀಡುವ ಮುನ್ನ, ಅದರ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಒಕ್ಕೂಟ, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಮಕ್ಕಳ ವಯಸ್ಸು, ಕಲಿಕೆಯ ಹಂತ ಹಾಗೂ ಮಾನಸಿಕ ಬೆಳವಣಿಗೆಯನ್ನು ಪರಿಗಣಿಸುವಂತೆ ಮನವಿ ಮಾಡಿದೆ.
ಇನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ AI ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ಶಾಲಾ ಶಿಕ್ಷಣದಲ್ಲಿ AI ಅಳವಡಿಕೆ ಕುರಿತು ಕೇಳಿದಾಗ, ಈ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇಲಾಖೆಯ ಸಚಿವರು ತಿಳಿಸಿದ್ದಾರೆ.
ಮಕ್ಕಳ ಚಿಂತನಾ ಸಾಮರ್ಥ್ಯದ ಬಗ್ಗೆ ಆತಂಕ
ಶಾಲಾ ಹಂತದಲ್ಲಿ AIಯನ್ನು ಅತಿಯಾಗಿ ಬಳಸುವುದರಿಂದ ಮಕ್ಕಳ ಸ್ವತಂತ್ರ ಚಿಂತನೆ, ವಿಶ್ಲೇಷಣಾ ಸಾಮರ್ಥ್ಯ ಹಾಗೂ ಸಮಸ್ಯೆ ಪರಿಹರಿಸುವ ಕೌಶಲ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ.
ಯೂನೆಸ್ಕೋ ಕೂಡ ಶಿಕ್ಷಣದಲ್ಲಿ AI ಬಳಕೆ ಮಾಡುವಾಗ ಸ್ವತಂತ್ರ ಚಿಂತನೆ, ನೈತಿಕತೆ ಹಾಗೂ ಮಾನವಕೇಂದ್ರಿತ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿರುವುದನ್ನು ತಜ್ಞರು ಉಲ್ಲೇಖಿಸಿದ್ದಾರೆ. AIಯನ್ನು ಶಿಕ್ಷಕರಿಗೆ ಪರ್ಯಾಯವಾಗಿ ಬಳಸುವ ಬದಲು, ಶಿಕ್ಷಕರ ಮಾರ್ಗದರ್ಶನದೊಂದಿಗೆ ಸಹಾಯಕ ಸಾಧನವಾಗಿ ಬಳಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈಗಾಗಲೇ ಹಲವು ವಿದ್ಯಾರ್ಥಿಗಳು ಮನೆಕೆಲಸ ಹಾಗೂ ಅಧ್ಯಯನಕ್ಕಾಗಿ AI ತಂತ್ರಜ್ಞಾನವನ್ನು ನೇರವಾಗಿ ಬಳಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಸ್ವಯಂ ಕಲಿಕೆಯ ಅಭ್ಯಾಸ ಹಾಗೂ ವಿಷಯದ ಆಳವಾದ ತಿಳುವಳಿಕೆಗೆ ತೊಂದರೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಪ್ರಾಥಮಿಕ ಕಲಿಕಾ ಹಂತದಲ್ಲೇ AI ಪರಿಚಯಿಸುವುದು ಸೂಕ್ತವಲ್ಲ. ಒಂದು ವೇಳೆ ಬಳಕೆಗೆ ಅವಕಾಶ ನೀಡುವುದಾದರೆ ಅದರ ಮಿತಿ ನಿಗದಿಪಡಿಸುವುದರ ಜೊತೆಗೆ ಶಿಕ್ಷಕರ ಮೇಲ್ವಿಚಾರಣೆ ಕಡ್ಡಾಯವಾಗಬೇಕು ಎಂದು ‘ಶಿಕ್ಷಣ ಉಳಿಸಿ’ ಹೋರಾಟಗಾರ್ತಿ ಐಶ್ವರ್ಯ ಅಭಿಪ್ರಾಯಪಟ್ಟಿದ್ದಾರೆ.
ಸ್ಪಷ್ಟ ಮಾರ್ಗಸೂಚಿಗೆ ಆಗ್ರಹ
ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ಮಕ್ಕಳು ಸಂಪೂರ್ಣವಾಗಿ AI ಮೇಲೆ ಅವಲಂಬಿತರಾಗದಂತೆ ನೋಡಿಕೊಳ್ಳುವುದು ಅಗತ್ಯ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ.
ಶಾಲಾ ಶಿಕ್ಷಣದಲ್ಲಿ AI ಜಾರಿಗೆ ತರುವ ಮುನ್ನ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಜೊತೆಗೆ ವಿದ್ಯಾರ್ಥಿಗಳ ವಯಸ್ಸು ಮತ್ತು ಕಲಿಕಾ ಹಂತಕ್ಕೆ ಅನುಗುಣವಾಗಿ ಸ್ಪಷ್ಟ ಮಾರ್ಗಸೂಚಿ ಹಾಗೂ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ನೈತಿಕತೆ ಹಾಗೂ ಜವಾಬ್ದಾರಿಯುತ ತಂತ್ರಜ್ಞಾನ ಬಳಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಚೌಕಟ್ಟು ರೂಪಿಸಬೇಕು ಎಂಬುದು ಶಿಕ್ಷಣ ತಜ್ಞರ ಆಗ್ರಹವಾಗಿದೆ.



