ರಾಮನಗರ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ದೈಹಿಕ ಶಿಕ್ಷಕರೊಬ್ಬರು ಪೊಲೀಸ್ ಕಚೇರಿಯ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ವಿಜಯನಗರ ಮೂಲದ ಶಶಿಧರ್ (49) ಎಂದು ಗುರುತಿಸಲಾಗಿದೆ. ಚನ್ನಪಟ್ಟಣ ತಾಲೂಕಿನ ಅನುದಾನಿತ ಪ್ರೌಢಶಾಲೆಯೊಂದರಲ್ಲಿ ಕಳೆದ 15 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಶಶಿಧರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಭಾನುವಾರ ಮುಂಜಾನೆ ವೈದ್ಯಕೀಯ ತಪಾಸಣೆ ಬಳಿಕ ಮುಂದಿನ ಕಾನೂನು ಪ್ರಕ್ರಿಯೆಯ ಭಾಗವಾಗಿ ಬೆರಳಚ್ಚು ಪಡೆಯಲು ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್‌ಪಿ ಕಚೇರಿಗೆ ಕರೆತರಲಾಗಿತ್ತು.
ಮೂರನೇ ಮಹಡಿಯಲ್ಲಿ ಬೆರಳಚ್ಚು ನೋಂದಣಿ ಪ್ರಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಶಶಿಧರ್ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

