ಬೆಂಗಳೂರು: ಖಾಲಿ ಜಾಗಗಳನ್ನು ಸ್ವಚ್ಛವಾಗಿಡದಿದ್ದರೆ ದಂಡ ವಿಧಿಸುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನೀಡಿದ್ದ ನೋಟಿಸ್‌ನಿಂದ ಹಲವು ದಿನಗಳಿಂದ ಮುಚ್ಚಿಹೋಗಿದ್ದ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಜಿಬಿಎ ನಿಯಮದ ಹಿನ್ನೆಲೆಯಲ್ಲಿ ಸೈಟ್ ಮಾಲೀಕರು ಜಾಗವನ್ನು ಸ್ವಚ್ಛಗೊಳಿಸಲು ಮುಂದಾದಾಗ, ಹಾಸಿಗೆಯಲ್ಲಿ ಸುತ್ತಿ ಎಸೆಯಲಾಗಿದ್ದ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಪ್ರಕರಣದ ತನಿಖೆ ನಡೆಸಿದ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಕೌಟುಂಬಿಕ ಕಲಹಕ್ಕೆ ಬಲಿಯಾದ ಮಹಿಳೆ:
ಒಡಿಶಾ ಮೂಲದ ಸಾಗರ್ ಚಂದ್ರ ರಾವತ್ (32) ಬಂಧಿತ ಆರೋಪಿ. ಈತ ತನ್ನ ಪತ್ನಿ ಅನುಸೂಯ (28) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಗರ್ ಹಾಗೂ ಅನುಸೂಯ ಪ್ರೀತಿಸಿ ಮದುವೆಯಾಗಿದ್ದರು. ಬೆಂಗಳೂರಿನಲ್ಲಿ ಪ್ರತ್ಯೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹಣಕಾಸಿನ ವಿಚಾರ ಹಾಗೂ ಪತಿಯ ಸಂಬಳದ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಆಗಸ್ಟ್ 11ರಂದು ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಮನೆಗೆ ಬಂದ ನಂತರ ಗಲಾಟೆ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಾಗರ್ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಶವವನ್ನು ಹಾಸಿಗೆಯಲ್ಲಿ ಸುತ್ತಿ ಖಾಲಿ ಸೈಟ್‌ನಲ್ಲಿ ಎಸೆದಿದ್ದ:
ಕೊಲೆ ಮಾಡಿದ ಬಳಿಕ ಸಾಗರ್ ಮೂರು ದಿನಗಳ ಕಾಲ ಮನೆಯಲ್ಲೇ ಶವದೊಂದಿಗೆ ಇದ್ದ ಎನ್ನಲಾಗಿದೆ. ನಂತರ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ, ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ಸೈಟ್‌ಗೆ ತೆಗೆದುಕೊಂಡು ಹೋಗಿ ಎಸೆದಿದ್ದ.
ಯಾರಿಗೂ ಅನುಮಾನ ಬಾರದಂತೆ ಶವ ಪತ್ತೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಆರೋಪಿ ಪ್ರತಿದಿನ ಸೈಟ್‌ನ ಸುತ್ತಮುತ್ತ ಓಡಾಡುತ್ತಿದ್ದ ಎನ್ನಲಾಗಿದೆ.
ಈ ನಡುವೆ ಜಿಬಿಎ ಖಾಲಿ ಸೈಟ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ನೋಟಿಸ್ ನೀಡಿತ್ತು. ಹೀಗಾಗಿ ಸೈಟ್ ಮಾಲೀಕರು ಜಾಗವನ್ನು ಸ್ವಚ್ಛಗೊಳಿಸಲು ಕಾರ್ಮಿಕರನ್ನು ಕಳುಹಿಸಿದ್ದರು. ಈ ವೇಳೆ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ. ನಾಯಿಗಳು ಶವವನ್ನು ಎಳೆದಾಡಿದ್ದರಿಂದ ಮೃತದೇಹದ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು.
ಸೈಟ್ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಸಂಪಿಗೆಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದರು.
ಬಟ್ಟೆಯ ಟ್ಯಾಗ್‌ನಿಂದ ಸಿಕ್ಕಿತು ಕೊಲೆಗಾರನ ಸುಳಿವು:
ಮೃತದೇಹದ ಮೇಲಿದ್ದ ಬಟ್ಟೆಯ ‘ವಿಶಾಲ್ ಮಾರ್ಟ್’ ಟ್ಯಾಗ್ ಪೊಲೀಸರಿಗೆ ಪ್ರಮುಖ ಸುಳಿವು ನೀಡಿದೆ. ಬಟ್ಟೆ ಖರೀದಿಯ ಬಿಲ್ ಕುರಿತು ಪರಿಶೀಲಿಸಿದ ಪೊಲೀಸರು, ಅದರ ಆಧಾರದ ಮೇಲೆ ಅನುಸೂಯಳ ಸಂಪರ್ಕ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ.
ಬಳಿಕ ಅನುಸೂಯ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ವಿಚಾರಣೆ ನಡೆಸಿದಾಗ, ದಂಪತಿ ನಡುವೆ ನಡೆಯುತ್ತಿದ್ದ ಗಲಾಟೆಯ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಸುಳಿವಿನ ಆಧಾರದ ಮೇಲೆ ಸಾಗರ್ ಚಂದ್ರ ರಾವತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ಸತ್ಯ ಹೊರಬಂದಿದೆ.
ಶವ ಪತ್ತೆಯಾದ ಒಂದು ವಾರದೊಳಗೆ ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



