ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಭಾರೀ ಮಳೆಯಾಗಿದ್ದು, ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ.
ಏರ್‌ಪೋರ್ಟ್ ರಸ್ತೆ, ಹೆಬ್ಬಾಳ, ರಾಜಾಜಿನಗರ, ಮೆಜೆಸ್ಟಿಕ್, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಇದರ ನಡುವೆ ಪೀಣ್ಯ-ದಾಸರಹಳ್ಳಿ ಸಮೀಪದ ಭಾರತಿ ಚಿತ್ರಮಂದಿರದಲ್ಲಿ ಅವಘಡ ಸಂಭವಿಸಿದೆ. ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಚಿತ್ರಮಂದಿರದ ಮೇಲ್ಛಾವಣಿಯ ಒಂದು ಭಾಗ ಹಠಾತ್ ಕುಸಿದು ಪ್ರೇಕ್ಷಕನ ಮೇಲೆ ಬಿದ್ದಿದೆ. ಘಟನೆಯಲ್ಲಿ ಪ್ರೇಕ್ಷಕನ ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವಘಡ ಸಂಭವಿಸಿದ ತಕ್ಷಣ ಚಿತ್ರಮಂದಿರದ ಸಿಬ್ಬಂದಿ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಗಾಯಗೊಂಡ ಪ್ರೇಕ್ಷಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಭಾರೀ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡಿವೆ. ಬಳಗೆರೆ ರಸ್ತೆಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಬಳಿ ಮಳೆ ನೀರು ನಿಂತು ಮಿನಿ ಕೆರೆಯಂತಾಗಿದೆ. ವೈಟ್‌ಫೀಲ್ಡ್‌ನ ವಿಬ್‌ಗಯಾರ್ ರಸ್ತೆಯಲ್ಲೂ ನೀರು ನಿಂತಿದ್ದು, ರಸ್ತೆಯೇ ಕೆರೆಯಂತಾಗಿದೆ. ನೀರು ನಿಂತ ಪರಿಣಾಮ ಕೆಲವು ವಾಹನಗಳು ಕೆಟ್ಟು ರಸ್ತೆಯಲ್ಲೇ ನಿಲ್ಲುವಂತಾಗಿದೆ.
ಸಹಕಾರ ನಗರದಲ್ಲೂ ಮಳೆ ನೀರು ರಸ್ತೆಯಲ್ಲಿ ನಿಂತಿದೆ. ಮೋರಿ ಬ್ಲಾಕ್ ಆಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ.
ನಗರದ ಹಲವು ಭಾಗಗಳಲ್ಲಿ ವಾಹನ ಸಂಚಾರ ನಿಧಾನಗೊಂಡಿದ್ದು, ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ವಾಹನ ಸವಾರರಿಗೆ ಸಂಚಾರ ಪೊಲೀಸರ ಎಚ್ಚರಿಕೆ:
ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆ ನೀರು ನಿಂತಿರುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಹಾಗೂ ಭಾರೀ ಮಳೆಯ ಸಂದರ್ಭದಲ್ಲಿ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಿದ್ದಾರೆ.
ನಗರದ ಟ್ರಾಫಿಕ್ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲು ಬಿಟಿಪಿ ಅಸ್ತ್ರಂ ಆ್ಯಪ್ ಹಾಗೂ ಸಂಚಾರ ಪೊಲೀಸರ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದು ಪ್ರಯಾಣಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.



