ಚಿಕ್ಕಮಗಳೂರು: ದಸರಾ ರಜೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಚಿಕ್ಕಕೆರೆಯಲ್ಲಿ ನಡೆದಿದೆ.
ಮೃತ ಮಕ್ಕಳನ್ನು 12 ವರ್ಷದ ತರುಣ್, ಭುವನ್ ಹಾಗೂ ಲಿಖಿತ್ ಎಂದು ಗುರುತಿಸಲಾಗಿದೆ. ಮೂವರು ಮಕ್ಕಳು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಂದೇ ಗ್ರಾಮದವರಾಗಿದ್ದರೂ ಬೇರೆ ಬೇರೆ ಶಾಲೆಗಳಲ್ಲಿ ಓದುತ್ತಿದ್ದರು.
ದಸರಾ ರಜೆ ಇದ್ದ ಹಿನ್ನೆಲೆಯಲ್ಲಿ ಮೂವರು ಮಕ್ಕಳು ಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಯಲ್ಲಿ ಮಹಿಳೆಯರು ಬಟ್ಟೆ ಹಾಗೂ ಪಾತ್ರೆ ತೊಳೆಯಲು ಬಳಸುವ ಕಟ್ಟೆಯ ಬಳಿ ಮಕ್ಕಳು ಈಜುತ್ತಿದ್ದ ವೇಳೆ, ಆಳವಾದ ಗುಂಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಈ ವೇಳೆ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ.
ಕಳೆದ ವರ್ಷ ಕೆರೆಯಲ್ಲಿ ಹೂಳು ತೆಗೆದಿದ್ದರಿಂದ ನೀರಿನ ಆಳ ಹೆಚ್ಚಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಅರಿವಿಲ್ಲದೆ ಮಕ್ಕಳು ಈಜಲು ತೆರಳಿದ್ದೇ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಮೂವರು ಮಕ್ಕಳು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ಕೆರೆ ಬಳಿ ಸೇರಿತ್ತು. ಮಕ್ಕಳ ಮೃತದೇಹಗಳನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಾಹಿತಿ ತಿಳಿದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



