ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್ಆರ್ಟಿಸಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಬಸ್ನಲ್ಲಿದ್ದ 12 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಗಾವತಿಯಿಂದ ಕೊಲ್ಹಾಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್, ರಸ್ತೆಯಲ್ಲಿ ನಿಂತಿದ್ದ ಟಿಪ್ಪರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಬಸ್ ಚಾಲಕ ಸಂಗಪ್ಪ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
12 ಪ್ರಯಾಣಿಕರಿಗೆ ಗಂಭೀರ ಗಾಯ:
ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ತಕ್ಷಣವೇ ನೆರವು ನೀಡಲಾಗಿದ್ದು, ಅವರನ್ನು ಸಂಕೇಶ್ವರ ಹಾಗೂ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ನಿಖರ ಕಾರಣವೇನು?
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಟಿಪ್ಪರ್ ನಿಂತಿದ್ದ ಸಂದರ್ಭ ಹಾಗೂ ಅಪಘಾತಕ್ಕೆ ಕಾರಣವಾದ ಇತರ ಅಂಶಗಳ ಕುರಿತು ತನಿಖೆ ಮುಂದುವರಿದಿದೆ. ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಅಥವಾ ಬಸ್ನ ವೇಗ ಅಪಘಾತಕ್ಕೆ ಕಾರಣವಾಗಿದೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.



