ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಘಟ್ಟತಳ ಹೇರೂರು ಎಸ್ಟೇಟ್ ಸಮೀಪ ಹುಲಿಯೊಂದು ಕಾಣಿಸಿಕೊಂಡಿದೆ.
ಸಿದ್ದಾಪುರ–ಮೈಸೂರು ಮುಖ್ಯ ರಸ್ತೆಯ ಬದಿಯಲ್ಲಿ ಹುಲಿ ಓಡಾಡುತ್ತಿರುವ ದೃಶ್ಯವನ್ನು ವಾಹನ ಸವಾರರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ.
ರಸ್ತೆಯ ಬದಿಯಲ್ಲಿ ಕಾಣಿಸಿಕೊಂಡ ಹುಲಿ ಬಳಿಕ ಸಮೀಪದ ಟಾಟಾ ಎಸ್ಟೇಟ್ ಕಡೆಗೆ ತೆರಳಿದೆ ಎಂದು ತಿಳಿದುಬಂದಿದೆ. ಈ ಭಾಗದಲ್ಲಿ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕಾಫಿ ತೋಟದ ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ಕಾಫಿ ತೋಟಗಳಿಗೆ ಒಂಟಿಯಾಗಿ ತೆರಳದಂತೆ ಸೂಚನೆ:
ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಒಂಟಿಯಾಗಿ ಹೋಗದಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಓಡಾಡುವುದನ್ನು ತಪ್ಪಿಸುವಂತೆಯೂ ಸೂಚಿಸಲಾಗಿದೆ.
ಹುಲಿ ಕಾಣಿಸಿಕೊಂಡರೆ ಅದರ ಸಮೀಪಕ್ಕೆ ತೆರಳುವುದು, ಹಿಂಬಾಲಿಸುವುದು ಅಥವಾ ಪ್ರಚೋದಿಸುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಲಾಗಿದೆ. ಹುಲಿಯ ಚಲನವಲನ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.



