ಲಕ್ಷ್ಮೇಶ್ವರ: ಬಾಲಕಿಗೆ ಬೈಕ್ ಡಿಕ್ಕಿ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ.
ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಶುಕ್ರವಾರ ರಾತ್ರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಪಟ್ಟಣದ ದೂಧನಾನಾ ದರ್ಗಾ ಬಳಿ ಘಟನೆ ನಡೆದಿದ್ದು, ನಾಗರಾಜ್ ಮಲ್ಲೇಶಪ್ಪ ಕಾಳೆ ಎಂಬ ಯುವಕ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬಾಲಕಿಯೊಬ್ಬಳು ಅಡ್ಡವಾಗಿ ಓಡಿ ಬಂದಿದ್ದಾಳೆ ಎನ್ನಲಾಗಿದೆ. ಈ ವಿಚಾರವಾಗಿ ದರ್ಗಾಕ್ಕೆ ಬೇರೆ ಊರುಗಳಿಂದ ಬಂದಿದ್ದ ಏಳೆಂಟು ಜನರು ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ನಾಗರಾಜ್ ಅವರನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ನೆರವಾದರು. ಘಟನೆ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕಾರ್ಯಕರ್ತರು, ಪೊಲೀಸ್ ಠಾಣೆ ಪಕ್ಕದ ಇಟ್ಟಿಗೇರಿ ದಂಡೆಯ ಮೇಲೆ ಮೌನ ಪ್ರತಿಭಟನೆ ಆರಂಭಿಸಿದರು. ಬಳಿಕ ಪೊಲೀಸ್ ಠಾಣೆ ಎದುರೂ ಜಮಾಯಿಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.
ಘಟನೆಗೆ ಕಾರಣ ಏನೇ ಇದ್ದರೂ ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗದಂತೆ ಪೊಲೀಸರು ಸೂಕ್ತ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆಯಿತು. ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕೆಲಕಾಲ ಪೊಲೀಸ್ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಯಿತು. ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರಿಯಿತು.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಮಹೇಶ ಕಲಘಟಗಿ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಈರಣ್ಣ ಪೂಜಾರ, ಹರೀಶ ಗೋಸಾವಿ, ಪ್ರಕಾಶ ಕಮಡೊಳ್ಳಿ, ಅಮೀತ ಗುಡಗೇರಿ, ಅಶೋಕ ಸೂರಣಗಿ, ಹೇಮಣ್ಣ ಬುರಡಿ, ಭರಮಣ್ಣ ಗೌಳಿ, ಈರಣ್ಣ ಹುಲಕೋಟಿ, ಪ್ರಕಾಶ ಜಾದವ, ನೀಲಕಂಠ ಕಣವಿ ಹಾಗೂ ಮೈಲಾರಪ್ಪ ಕಾಳೆ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಘಟನೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹಲ್ಲೆ ಆರೋಪದ ಕುರಿತು ಪೊಲೀಸರ ತನಿಖೆ ಹಾಗೂ ಮುಂದಿನ ಕ್ರಮಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.



