ಗದಗ: ಕೃಷಿ ಹೊಂಡದ ಪೈಪ್ನಲ್ಲಿ ಅವಿತು ಕುಳಿತಿದ್ದ ಗಾಯಗೊಂಡ ಗಂಡು ಚಿರತೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹನುಮಂತ ಪವಾರ್ ಎಂಬುವವರ ಜಮೀನಿನಲ್ಲಿರುವ ಕೃಷಿ ಹೊಂಡದ ಪೈಪ್ನಲ್ಲಿ ಸುಮಾರು 8ರಿಂದ 9 ವರ್ಷ ವಯಸ್ಸಿನ ಗಂಡು ಚಿರತೆ ಕುಳಿತಿರುವುದನ್ನು ಕುರಿಗಾಹಿಗಳು ಗಮನಿಸಿದ್ದಾರೆ. ಚಿರತೆಯನ್ನು ಕಂಡು ಆತಂಕಗೊಂಡ ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಿತ್ರಾಣಗೊಂಡಿದ್ದ ಚಿರತೆಯನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಚಿರತೆ ನೀರು ಮತ್ತು ಆಹಾರವಿಲ್ಲದೆ ಬಳಲುತ್ತಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಡಿಎಫ್ಒ ಸಂತೋಷಕುಮಾರ್ ಕೆಂಚೆಪ್ಪನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಚಿರತೆಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿರತೆ ಮೃತಪಟ್ಟಿದೆ.



