ಚಿಕ್ಕಬಳ್ಳಾಪುರ: ಆರು ತಿಂಗಳ ಬಳಿಕ ಮತ್ತೆ ಚಾರಣಕ್ಕೆ ಮುಕ್ತವಾಗಿರುವ ಸ್ಕಂದಗಿರಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಈಗ ಶುಲ್ಕದ ಹೊರೆ ಹೆಚ್ಚಾಗಿದೆ.
ವಾರದ ದಿನಗಳಲ್ಲಿ ₹250 ಇದ್ದ ಚಾರಣ ಶುಲ್ಕವನ್ನು ಶನಿವಾರ ಮತ್ತು ಭಾನುವಾರ ₹500ಕ್ಕೆ ಹೆಚ್ಚಿಸಲಾಗಿದೆ. ಈ ನಿರ್ಧಾರಕ್ಕೆ ಚಾರಣಿಗರಿಂದ ವಿರೋಧ ವ್ಯಕ್ತವಾಗಿದೆ.
ಜನಪ್ರಿಯ ಚಾರಣ ಸ್ಥಳಗಳಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸ್ಕಂದಗಿರಿ ಬೆಟ್ಟದ ಚಾರಣವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅರಣ್ಯ ಇಲಾಖೆ ಮತ್ತೆ ಚಾರಣಕ್ಕೆ ಅವಕಾಶ ನೀಡಿದೆ.
ಹೊಸ ವ್ಯವಸ್ಥೆಯಡಿ ಚಾರಣಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಥಮ ಚಿಕಿತ್ಸಾ ಸೌಲಭ್ಯ, ಮೊಬೈಲ್ ನೆಟ್ವರ್ಕ್ ಲಭ್ಯವಿರುವ ಸ್ಥಳಗಳ ಗುರುತಿಸುವಿಕೆ ಹಾಗೂ ನಿಯಂತ್ರಣ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಪ್ರತಿ 10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಿಯನ್ನು ನಿಯೋಜಿಸಲಾಗುತ್ತಿದ್ದು, ಗುಂಪಿನ ಸದಸ್ಯರ ಸಂಪರ್ಕ ವಿವರಗಳು ಮಾರ್ಗದರ್ಶಿಯ ಬಳಿ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ವಾರಾಂತ್ಯದಲ್ಲಿ ಶುಲ್ಕವನ್ನು ದುಪ್ಪಟ್ಟುಗೊಳಿಸಿರುವುದಕ್ಕೆ ಪ್ರವಾಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶುಲ್ಕ ಹೆಚ್ಚಿಸಿದರೂ ಬೆಟ್ಟಕ್ಕೆ ತೆರಳುವ ರಸ್ತೆಯ ಸ್ಥಿತಿ ಸುಧಾರಿಸಿಲ್ಲ. ಕುಡಿಯುವ ನೀರು, ಪರಿಸರ ಸ್ನೇಹಿ ವಾಹನಗಳು ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯಿದೆ. ಭದ್ರತೆ ಮತ್ತು ಶೌಚಾಲಯಗಳ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು ಎಂದು ಚಾರಣಿಗರು ಆಗ್ರಹಿಸಿದ್ದಾರೆ.
ನಾಲ್ವರು ಸದಸ್ಯರಿರುವ ಕುಟುಂಬ ವಾರಾಂತ್ಯದಲ್ಲಿ ಚಾರಣ ಕೈಗೊಂಡರೆ ಕೇವಲ ಪ್ರವೇಶ ಶುಲ್ಕಕ್ಕೇ ₹2,000 ಪಾವತಿಸಬೇಕಾಗುತ್ತದೆ. ಗುಂಪು ಟಿಕೆಟ್ ವ್ಯವಸ್ಥೆಯೂ ಇಲ್ಲದಿರುವುದರಿಂದ ಪ್ರವಾಸಿಗರಿಗೆ ಆರ್ಥಿಕ ಹೊರೆಯಾಗಲಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಇನ್ನು ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಶುಲ್ಕ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಸುರಕ್ಷತಾ ಕ್ರಮಗಳೊಂದಿಗೆ ಮತ್ತೆ ಆರಂಭವಾಗಿರುವ ಸ್ಕಂದಗಿರಿ ಚಾರಣ ಇದೀಗ ಶುಲ್ಕ ಹೆಚ್ಚಳದ ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದೆ.



