ಶಿವಮೊಗ್ಗ: ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಹಾಗೂ ಮಾರ್ಗದರ್ಶನದಲ್ಲಿ ನಡೆದ ಪ್ರಾಣಿ ವಿನಿಮಯ ಯೋಜನೆಯಡಿ ಬಿಹಾರದ ಪಾಟ್ನಾ ಮೃಗಾಲಯದಿಂದ 8 ತೋಳಗಳು ಮತ್ತು 4 ಘರಿಯಾಲ್ಗಳನ್ನು ಕರೆತರಲಾಗಿದೆ.
ಪ್ರಾಣಿ ವಿನಿಮಯ ಯೋಜನೆಯ ಭಾಗವಾಗಿ ಶಿವಮೊಗ್ಗದ ಹುಲಿ-ಸಿಂಹ ಧಾಮದಿಂದ ಎರಡು ಗಂಡು ಕಾಡುಕೋಣಗಳನ್ನು ಪಾಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ.
ಪಾಟ್ನಾದಿಂದ ಬಂದ ತೋಳಗಳ ಪೈಕಿ ಐದು ತೋಳಗಳನ್ನು ಮೂರು ವಾರಗಳ ಕಾಲ ವಿಶೇಷ ಕ್ವಾರಂಟೈನ್ನಲ್ಲಿ ಇರಿಸಿ ಆರೈಕೆ ಮಾಡಲಾಗಿತ್ತು. ಹೊಸ ವಾತಾವರಣ, ಆಹಾರ ಪದ್ಧತಿ ಮತ್ತು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ತಪಾಸಣೆಯ ಬಳಿಕ ಪ್ರಾಣಿಗಳ ಆರೋಗ್ಯ ಸ್ಥಿತಿ ಉತ್ತಮವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವುಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶನ ಆವರಣಕ್ಕೆ ಬಿಡಲಾಗಿದೆ.
ಮೃಗಾಲಯದ ಆಕರ್ಷಣೆ ಹೆಚ್ಚಳ:
ಹೊಸ ವನ್ಯಜೀವಿಗಳ ಆಗಮನದಿಂದ ಶಿವಮೊಗ್ಗ ಮೃಗಾಲಯದಲ್ಲಿ ವನ್ಯಜೀವಿ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ. ಅಲ್ಲದೆ, ಪ್ರವಾಸಿಗರಿಗೂ ತೋಳ ಮತ್ತು ಘರಿಯಾಲ್ಗಳನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ. ಮೃಗಾಲಯದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಣಿಗಳ ಆರೋಗ್ಯ ಮತ್ತು ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಬಿ.ಎಂ., ಕೇಂದ್ರ ಮೃಗಾಲಯ ಪ್ರಾಧಿಕಾರದ ನಿರ್ದೇಶನದಂತೆ ಪ್ರಾಣಿ ವಿನಿಮಯ ಪ್ರಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವಿನಿಮಯದಿಂದ ಶಿವಮೊಗ್ಗ ಮೃಗಾಲಯದಲ್ಲಿರುವ ಪ್ರಾಣಿ ಪ್ರಭೇದಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮೃಗಾಲಯವನ್ನು ಸಣ್ಣ ಮೃಗಾಲಯದಿಂದ ಮಧ್ಯಮ ಗಾತ್ರದ ಮೃಗಾಲಯವಾಗಿ ಮೇಲ್ದರ್ಜೆಗೇರಿಸುವ ನಿರೀಕ್ಷೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



