ಯಾದಗಿರಿ: ಭೂ ಪರಿವರ್ತನೆಗೆ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮಾನ್ವಿ ನಗರ ಯೋಜನಾ ಪ್ರಾಧಿಕಾರದ ಪ್ರಭಾರ ನಗರ ಯೋಜನಾ ಸದಸ್ಯ ಕಾರ್ಯದರ್ಶಿ ಶರಣಪ್ಪ ಹಾಗೂ ಅವರ ಚಾಲಕ ಸಂತೋಷ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಎನ್ಎ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಹಾಗೂ ಲೇಔಟ್ನ ಕೆಲ ಭಾಗವನ್ನು ಕಮರ್ಷಿಯಲ್ ಬಳಕೆಗೆ ಬದಲಾಯಿಸಲು ಶರಣಪ್ಪ ಅವರು 3.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಭೂ ಮಾಲೀಕ ಸುಧಾಕರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಯಾದಗಿರಿ ಕಚೇರಿಯಲ್ಲಿ ಭೂ ಮಾಲೀಕರಿಂದ 3 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಶರಣಪ್ಪ ಮತ್ತು ಚಾಲಕ ಸಂತೋಷ ಅವರನ್ನು ವಶಕ್ಕೆ ಪಡೆದಿದ್ದಾರೆ.
ಶರಣಪ್ಪ ಅವರು ಯಾದಗಿರಿ ಹಾಗೂ ಮಾನ್ವಿ ಎರಡೂ ಕಡೆ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಯಾದಗಿರಿಗೆ ಬಂದು ಹಣ ನೀಡುವಂತೆ ಅಧಿಕಾರಿ ಒತ್ತಾಯಿಸಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

