HomeBengaluru Newsರಾಜಾನುಕುಂಟೆಯಲ್ಲಿ ವಿದ್ಯುತ್ ಅವಘಡ: ಇಬ್ಬರು ಮಕ್ಕಳ ಸ್ಥಿತಿ ಗಂಭೀರ, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ?

ರಾಜಾನುಕುಂಟೆಯಲ್ಲಿ ವಿದ್ಯುತ್ ಅವಘಡ: ಇಬ್ಬರು ಮಕ್ಕಳ ಸ್ಥಿತಿ ಗಂಭೀರ, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ?

For Dai;y Updates Join Our whatsapp Group

ಬೆಂಗಳೂರು: ಮನೆ ಮುಂದೆ ಹಾದುಹೋಗಿದ್ದ ವಿದ್ಯುತ್ ತಂತಿಗೆ ಕಟ್ಟಡ ನಿರ್ಮಾಣಕ್ಕೆ ಬಳಸುವ ಲೋಹದ ಅಳತೆ ಟೇಪ್ ತಗುಲಿದ ಪರಿಣಾಮ ಇಬ್ಬರು ಮಕ್ಕಳು ವಿದ್ಯುತ್ ಶಾಕ್‌ಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯ ಅದ್ದೇವಿಶ್ವನಾಥಪುರದಲ್ಲಿ ನಡೆದಿದೆ.

ಕೊಟ್ರೇಶಿ ಮತ್ತು ಸುಧಾ ದಂಪತಿಯ ಐದು ವರ್ಷದ ಮಗ ಅಯಾನ್ ಹಾಗೂ 13 ವರ್ಷದ ಮಗಳು ಸಾನ್ವಿ ಗಾಯಗೊಂಡ ಮಕ್ಕಳು. ಇಬ್ಬರನ್ನೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಟವಾಡುತ್ತಿದ್ದ ಬಾಲಕನಿಂದ ಅವಘಡ:

ಮಾಹಿತಿಯ ಪ್ರಕಾರ, ಮನೆಯ ಮುಂದೆ ಆಟವಾಡುತ್ತಿದ್ದ ಅಯಾನ್ ಕಟ್ಟಡ ನಿರ್ಮಾಣಕ್ಕೆ ಬಳಸುವ ಲೋಹದ ಅಳತೆ ಟೇಪ್ ಅನ್ನು ವಿದ್ಯುತ್ ತಂತಿಯ ಮೇಲೆ ಹಾಕಿದ್ದಾನೆ ಎನ್ನಲಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಬಾಲಕನಿಗೆ ಶಾಕ್ ತಗುಲಿದೆ. ತಮ್ಮನನ್ನು ಕರೆದುಕೊಂಡು ಬರಲು ಹೊರಗೆ ಬಂದಿದ್ದ ಅಕ್ಕ ಸಾನ್ವಿಗೂ ವಿದ್ಯುತ್ ಸ್ಪರ್ಶಿಸಿ ಗಂಭೀರ ಗಾಯಗಳಾಗಿವೆ.

ಘಟನೆಯಲ್ಲಿ ಸಾನ್ವಿಯ ಬಲಗೈಗೆ ತೀವ್ರ ಹಾನಿಯಾಗಿದ್ದು, ವೈದ್ಯರು ಕೈ ಕತ್ತರಿಸುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ. ಬಾಲಕ ಅಯಾನ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ತಾಯಿ ದಿನಸಿ ತರಲು ಮನೆಯಿಂದ ಹೊರಗೆ ಹೋಗಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮನೆ ಮಾಲೀಕ, ಬೆಸ್ಕಾಂ ವಿರುದ್ಧ ದೂರು:

ಕೊಟ್ರೇಶಿ ಮತ್ತು ಸುಧಾ ದಂಪತಿ ಸುಮಾರು ಎರಡೂವರೆ ತಿಂಗಳ ಹಿಂದಷ್ಟೇ ಈ ಬಾಡಿಗೆ ಮನೆಗೆ ಬಂದಿದ್ದರು. ಮನೆ ಮುಂದೆ ವಿದ್ಯುತ್ ತಂತಿ ಹಾದುಹೋಗಿರುವುದನ್ನು ಗಮನಿಸಿದ್ದ ಕೊಟ್ರೇಶಿ, ತಂತಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿಸುವಂತೆ ಮನೆ ಮಾಲೀಕ ಸೋಮಶೇಖರ್ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಬೆಸ್ಕಾಂ ಅಧಿಕಾರಿಗಳ ಗಮನಕ್ಕೂ ಈ ವಿಚಾರ ತರಲು ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಕ್ಕಳ ತಂದೆ ಕೊಟ್ರೇಶಿ ನೀಡಿದ ದೂರಿನ ಮೇರೆಗೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕ ಸೋಮಶೇಖರ್ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪಗಳ ಕುರಿತು ತನಿಖೆ ನಡೆಯಬೇಕಿದೆ.

ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ:

ಹಾವೇರಿಯಿಂದ ಬೆಂಗಳೂರಿಗೆ ಬಂದು ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕೊಟ್ರೇಶಿ ಕುಟುಂಬಕ್ಕೆ ಈ ಘಟನೆ ದೊಡ್ಡ ಆಘಾತ ನೀಡಿದೆ. ಮಕ್ಕಳ ಭವಿಷ್ಯ ರೂಪಿಸುವ ಕನಸಿನೊಂದಿಗೆ ನಗರಕ್ಕೆ ಬಂದಿದ್ದ ದಂಪತಿ, ಇದೀಗ ಇಬ್ಬರು ಮಕ್ಕಳ ಆರೋಗ್ಯದ ಬಗ್ಗೆ ಆತಂಕದಲ್ಲಿದ್ದಾರೆ. ಮನೆ ಮಾಲೀಕರು ಮಕ್ಕಳನ್ನು ಬಂದು ನೋಡಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಸ್.ಆರ್. ವಿಶ್ವನಾಥ್, ಗಾಯಾಳು ಮಕ್ಕಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳೊಂದಿಗೂ ಈ ಕುರಿತು ಚರ್ಚಿಸಿರುವುದಾಗಿ ಹೇಳಿದ ಅವರು, ಇಂತಹ ಘಟನೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮನೆಯವರ ನಿರ್ಲಕ್ಷ್ಯದ ಬಗ್ಗೆಯೂ ಪರಿಶೀಲನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಇಂಧನ ಸಚಿವರಿಗೂ ಮನವಿ ಸಲ್ಲಿಸುವುದಾಗಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img