ಬೀದರ್: ಚಲಿಸುತ್ತಿದ್ದ ಟ್ರ್ಯಾಕ್ಟರ್ನಲ್ಲಿದ್ದ ಕಬ್ಬಿನ ಲೋಡ್ ಏಕಾಏಕಿ ಬೈಕ್ ಸವಾರನ ಮೇಲೆ ಬಿದ್ದ ಘಟನೆ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಅದೃಷ್ಟವಶಾತ್, ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಬ್ಬಿನ ಲೋಡ್ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ತಿರುವು ಪಡೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದೇ ಸಂದರ್ಭದಲ್ಲಿ ಎದುರು ದಿಕ್ಕಿನಿಂದ ಬೈಕ್ನಲ್ಲಿ ಬರುತ್ತಿದ್ದ ಸವಾರನ ಮೇಲೆ ಕಬ್ಬಿನ ಲೋಡ್ ಬಿದ್ದಿದೆ. ಪರಿಣಾಮ, ಬೈಕ್ ಸಮೇತ ಸವಾರ ಕಬ್ಬಿನ ರಾಶಿಯೊಳಗೆ ಸಿಲುಕಿಕೊಂಡಿದ್ದಾನೆ.
ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರ್ಯಪ್ರವೃತ್ತರಾಗಿ ಕಬ್ಬಿನ ಲೋಡ್ ತೆರವುಗೊಳಿಸಿ ಬೈಕ್ ಸವಾರನನ್ನು ರಕ್ಷಿಸಿದ್ದಾರೆ. ಈ ಭಯಾನಕ ಘಟನೆಯ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ವಿಷಯ ತಿಳಿದು ಮನ್ನಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

