ಗೋರಖ್ಪುರ: ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೂವರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರಾಲಿಗೆ ಅಳವಡಿಸಿದ್ದ ಕಬ್ಬಿಣದ ಕಂಬವು ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಈ ದುರಂತ ಸಂಭವಿಸಿದೆ.
ಗೋರಖ್ಪುರದ ಗುಲ್ರಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಅಯೋಧ್ಯ ಪ್ರಸಾದ್ ಚೌಹಾಣ್ ತೋಲಾ ಬಳಿ ಸಂಜೆ ಸುಮಾರು 5 ಗಂಟೆಗೆ ಘಟನೆ ನಡೆದಿದೆ. ಭಕ್ತರು ದುರ್ಗಾ ಮೂರ್ತಿಯನ್ನು ವಿಸರ್ಜನೆಗಾಗಿ ಟ್ರ್ಯಾಕ್ಟರ್-ಟ್ರಾಲಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿಗೆ ಕಬ್ಬಿಣದ ಕಂಬ ಸ್ಪರ್ಶಿಸಿದೆ. ಇದರಿಂದ ಟ್ರಾಲಿಯಲ್ಲಿದ್ದವರಿಗೆ ವಿದ್ಯುತ್ ಆಘಾತ ತಗುಲಿದೆ.
10 ಮಂದಿಗೆ ಸುಟ್ಟ ಗಾಯ:
ವಿದ್ಯುತ್ ಆಘಾತದಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡ 10 ಮಂದಿಯನ್ನು ತಕ್ಷಣ ಗೋರಖ್ಪುರದ ಬಿಆರ್ಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.










