ಬೆಂಗಳೂರು: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿ ಓಡಿದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಈ ವೇಳೆ ಕಾರು, ಬೈಕ್ಗಳಿಗೆ ಹಾನಿಯಾಗಿದ್ದು, ಬೆಳ್ಳಿಯ ಅಂಬಾರಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
ಈ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಜಂಬೂಸವಾರಿ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.
ಮುಂದಿನ ವರ್ಷದಿಂದ ಆನೆಗಳಿಗೆ ಕಡ್ಡಾಯ ತಾಲೀಮು:
ಮುಂದಿನ ವರ್ಷದಿಂದ ದಸರಾ ಜಂಬೂಸವಾರಿ ಆರಂಭಿಸುವ ಮೊದಲು ಆನೆಗಳಿಗೆ ಕನಿಷ್ಠ 20 ದಿನಗಳಿಂದ ಒಂದು ತಿಂಗಳವರೆಗೆ ತಾಲೀಮು ನಡೆಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನುರಿತ ಮಾವುತರು ಹಾಗೂ ಕಾವಾಡಿಗರ ನೇತೃತ್ವದಲ್ಲಿ ಈ ತರಬೇತಿ ನಡೆಯಬೇಕು ಎಂದು ನಿರ್ದೇಶನ ನೀಡಲಾಗಿದೆ.
ಜಂಬೂಸವಾರಿಯಂತಹ ಪ್ರಮುಖ ಉತ್ಸವಗಳಲ್ಲಿ ಆನೆಗಳು ಜನಸಂದಣಿ ಮತ್ತು ಸದ್ದುಗದ್ದಲಕ್ಕೆ ಬೆದರಿ ನಿಯಂತ್ರಣ ತಪ್ಪದಂತೆ ಮುಂಚಿತವಾಗಿ ಸಿದ್ಧತೆ ಕೈಗೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ.
ಸುರಕ್ಷತೆಗೆ ಹೆಚ್ಚಿನ ಒತ್ತು:
ಶಿವಮೊಗ್ಗ ದಸರಾ ವೇಳೆ ನಡೆದ ಘಟನೆ ಮುಂದಿನ ಉತ್ಸವಗಳಿಗೆ ಎಚ್ಚರಿಕೆಯಾಗಿದೆ. ಹೀಗಾಗಿ ಆನೆಗಳ ಆರೋಗ್ಯ, ವರ್ತನೆ ಹಾಗೂ ತಾಲೀಮು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮುಂದಿನ ದಸರಾ ಜಂಬೂಸವಾರಿ ವೇಳೆ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ಕೈಗೊಳ್ಳುವ ಕ್ರಮಗಳು ಮಹತ್ವ ಪಡೆದುಕೊಂಡಿವೆ.









