ಪಾಟ್ನಾ: ಬಿಹಾರದ ಸೀವನ್ ಜಿಲ್ಲೆಯಲ್ಲಿ ಪಟಾಕಿ ತಯಾರಿಸುತ್ತಿದ್ದ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಸೀವನ್ ಜಿಲ್ಲೆಯ ಬರ್ಹರಿಯಾ ಬ್ಲಾಕ್ನ ಜಾಮೊ ಪೊಲೀಸ್ ಠಾಣೆ ವ್ಯಾಪ್ತಿಯ ಅಲಂಪುರ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುರುವಾರ ಸಂಜೆ ಸುಮಾರು 5.20ರ ವೇಳೆಗೆ ಸ್ಫೋಟದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಸ್ಫೋಟ ಸಂಭವಿಸಿದ ಮನೆಯಲ್ಲಿ ಏಳು ಮಂದಿ ಇದ್ದರು ಎನ್ನಲಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ:
72 ವರ್ಷದ ಅಮ್ರುದ್ದೀನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಮೃತರು ಅವರ ಕುಟುಂಬದ ಸದಸ್ಯರು ಎಂದು ಗುರುತಿಸಲಾಗಿದೆ. ಸ್ಫೋಟದ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ.
ಅವಶೇಷಗಳ ನಡುವೆ ಸಣ್ಣಪುಟ್ಟ ಸ್ಫೋಟಗಳು ಮುಂದುವರಿದಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸ್ಥಳವನ್ನು ಸುತ್ತುವರಿದು, ಜನರು ಸುಮಾರು 200 ಮೀಟರ್ ದೂರದಲ್ಲಿರುವಂತೆ ಸೂಚಿಸಿದ್ದಾರೆ.
ಅಕ್ರಮ ಪಟಾಕಿ ತಯಾರಿಕೆ ಶಂಕೆ:
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೆಸಿಬಿ ಯಂತ್ರಗಳ ನೆರವಿನಿಂದ ಅವಶೇಷಗಳನ್ನು ತೆರವುಗೊಳಿಸಿ, ಸಿಲುಕಿರುವವರನ್ನು ಹೊರತೆಗೆಯಲು ಪ್ರಯತ್ನಿಸಲಾಗುತ್ತಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಜನವಸತಿ ಪ್ರದೇಶದ ಸಮೀಪ ಸುರಕ್ಷತಾ ಮಾನದಂಡಗಳನ್ನು ಪಾಲಿಸದೆ ಅಕ್ರಮವಾಗಿ ಪಟಾಕಿ ತಯಾರಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.









