ಮಂಡ್ಯ: ಹುಟ್ಟುಹಬ್ಬದ ದಿನವೇ ಮನೆಯಿಂದ ಬೈಕ್ನಲ್ಲಿ ಹೊರಟಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಸಮೀಪ ನಡೆದಿದೆ.
ಮೈಸೂರಿನ ವೈಭವ್ (17) ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದು, ಆತನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ವೈಭವ್ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ನಿನ್ನೆ ಆತನ ಹುಟ್ಟುಹಬ್ಬವಾಗಿದ್ದರಿಂದ ಮನೆಯಲ್ಲಿ ಸಂಭ್ರಮವಿತ್ತು. ಈ ನಡುವೆ ವೈಭವ್ ಬೈಕ್ನಲ್ಲಿ ಮನೆಯಿಂದ ಹೊರಟಿದ್ದ. ಬಳಿಕ ಬೆಳಗೊಳ ಸಮೀಪದ ವರುಣಾ ನಾಲೆ ಬಳಿ ಆತನ ಬೈಕ್, ಬಟ್ಟೆ ಮತ್ತು ಮೊಬೈಲ್ ಪತ್ತೆಯಾಗಿವೆ.
ವೈಭವ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ನಾಲೆಯ ದಂಡೆಯ ಮೇಲೆ ಆತನ ವಸ್ತುಗಳು ಪತ್ತೆಯಾಗಿರುವುದರಿಂದ ನೀರಿಗೆ ಇಳಿದು ಕೊಚ್ಚಿಹೋಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಆತ ನಾಪತ್ತೆಯಾಗಿರುವುದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ಥಳೀಯರೂ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.
ಇನ್ನು ಪ್ರಕರಣ ಕೆ.ಆರ್.ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಯ ನಾಪತ್ತೆಯ ಹಿಂದಿನ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.









