ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಬಿಂಡಿಗ ದೇವಿರಮ್ಮನ ಬೆಟ್ಟ ಹತ್ತುವ ವೇಳೆ ಹೃದಯಾಘಾತ ಸಂಭವಿಸಿ 32 ವರ್ಷದ ಭಕ್ತರೊಬ್ಬರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಕನ್ಯಾಡಿ ನಿವಾಸಿ ಲಕ್ಷ್ಮಣ್ (32) ಮೃತ ದುರ್ದೈವಿ. ದೇವಿರಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಬೆಟ್ಟ ಹತ್ತುತ್ತಿದ್ದಾಗ ಏಕಾಏಕಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಪರಿಣಾಮ ಅವರು ಮೃತಪಟ್ಟಿದ್ದಾರೆ.
ದೇವಿರಮ್ಮನ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ.
ಪುರಾಣ ಪ್ರಸಿದ್ಧ ದೇವಿರಮ್ಮನ ಕ್ಷೇತ್ರದಲ್ಲಿ ಇಂದಿಗೂ ಮೈಸೂರು ಅರಸರ ಮನೆಯಿಂದ ದೇವಿಗೆ ಮಡಿಲಕ್ಕಿ ಸೇವೆ ಸಲ್ಲಿಸುವ ಧಾರ್ಮಿಕ ಪರಂಪರೆ ಮುಂದುವರಿದಿದೆ. ಈ ಬಾರಿ ಭಕ್ತರ ಅನುಕೂಲಕ್ಕಾಗಿ ಸತತ ಎರಡು ದಿನಗಳ ಕಾಲ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಹಗಲಿನ ವೇಳೆಯಲ್ಲಷ್ಟೇ ಭಕ್ತರು ಬೆಟ್ಟ ಹತ್ತುತ್ತಿದ್ದಾರೆ.









