ಮಂಡ್ಯ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಬ್ರಹ್ಮೋತ್ಸವವು ಗರುಡ ಧ್ವಜಾರೋಹಣದೊಂದಿಗೆ ವಿಧ್ಯುಕ್ತವಾಗಿ ಆರಂಭಗೊಂಡಿದೆ.
ಒಂಬತ್ತು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ರಾಜಮುಡಿ ಕಿರೀಟಧಾರಣಾ ಮಹೋತ್ಸವ ಪ್ರಮುಖ ಆಕರ್ಷಣೆಯಾಗಿದೆ.
ನವೆಂಬರ್ 17ರಂದು ರಾತ್ರಿ 7 ಗಂಟೆಗೆ ರಾಜಮುಡಿ ಕಿರೀಟಧಾರಣಾ ಮಹೋತ್ಸವ ನಡೆಯಲಿದೆ. ಮೈಸೂರು ಸಂಸ್ಥಾನದ ರಾಜ ಒಡೆಯರ್ ಅವರು ದೇವರಿಗೆ ಸಮರ್ಪಿಸಿರುವ ಅಪರೂಪದ ವಜ್ರಖಚಿತ ರಾಜಮುಡಿ ಕಿರೀಟ, ಗಂಡುಭೇರುಂಡ ಪದಕ ಸೇರಿದಂತೆ ಸುಮಾರು 16 ಬಗೆಯ ಚಿನ್ನಾಭರಣಗಳಿಂದ ಚೆಲುವನಾರಾಯಣಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಈ ವೈಭವದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇನ್ನು ಮಕ್ಕಳಿಲ್ಲದ ದಂಪತಿಗಳು ಶ್ರದ್ಧಾಭಕ್ತಿಯಿಂದ ಆಗಮಿಸಿ ಹರಕೆ ಸಲ್ಲಿಸುವ ಕೊಪ್ಪಲುಮಯ ಜಾತ್ರಾ ಮಹೋತ್ಸವವು ನವೆಂಬರ್ 19ರಂದು ನಡೆಯಲಿದೆ. ನವದಂಪತಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುವ ನಿರೀಕ್ಷೆಯಿದೆ.
ನವೆಂಬರ್ 22ರಂದು ಕಲ್ಯಾಣಿ ತೀರದಲ್ಲಿ ತೀರ್ಥಸ್ನಾನ ಹಾಗೂ ಮಹಾರಥೋತ್ಸವ ನಡೆಯಲಿದ್ದು, ಇದರೊಂದಿಗೆ ಒಂಬತ್ತು ದಿನಗಳ ಕಾರ್ತಿಕ ಮಾಸದ ಧಾರ್ಮಿಕ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ. ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆವರಣದಲ್ಲಿ ವಿಶೇಷ ದೀಪಾಲಂಕಾರ ಹಾಗೂ ಸುಗಮ ದರ್ಶನಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ದೇವಾಲಯ ಆಡಳಿತ ತಿಳಿಸಿದೆ.










