ಗದಗ: ಜಿಲ್ಲೆಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಎಷ್ಟು ಬಂದಿದೆ? ಖರ್ಚು ಎಷ್ಟು? ಕಾಮಗಾರಿ ಯಾವ ಹಂತದಲ್ಲಿದೆ? ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ತಲುಪಿದೆಯೇ? ಹೀಗೆ ನೇರ ಪ್ರಶ್ನೆಗಳ ಮೂಲಕ ಅಧಿಕಾರಿಗಳಿಂದ ಇಲಾಖಾವಾರು ಲೆಕ್ಕ ಕೇಳಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಮರ್ಪಕ ಮಾಹಿತಿ ನೀಡದ ಮತ್ತು ಕರ್ತವ್ಯ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನವೆಂಬರ್ 16 ಮತ್ತು 17ರಂದು ಎರಡು ದಿನಗಳ ಕಾಲ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ 81 ಇಲಾಖೆಗಳು ಹಾಗೂ ನಿಗಮಗಳ ಕಾರ್ಯವೈಖರಿಯನ್ನು ಸಚಿವರು ಪರಿಶೀಲಿಸಿದರು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ನೀರಾವರಿ, ಲೋಕೋಪಯೋಗಿ, ಅರಣ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅನುದಾನ ಬಳಕೆ, ಕಾಮಗಾರಿಗಳ ಪ್ರಗತಿ ಮತ್ತು ಯೋಜನೆಗಳ ಅನುಷ್ಠಾನದ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.38ರಷ್ಟು ಕಡಿಮೆ ಮಳೆಯಾಗಿದ್ದು, ಬರದಿಂದ ಉಂಟಾದ ಹಾನಿಯ ಅಂದಾಜು ಮೊತ್ತ ₹262 ಕೋಟಿ ಎಂದು ಸಭೆಗೆ ತಿಳಿಸಲಾಯಿತು. ಕೃಷಿ ಇಲಾಖೆಗೆ ₹23.29 ಕೋಟಿ ಅನುದಾನ ಬಿಡುಗಡೆಯಾಗಿದ್ದು, ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಎನ್ಡಿಆರ್ಎಫ್ ನಿಯಮಾವಳಿಯಡಿ ಪರಿಹಾರ ವಿತರಣೆ ಸಮರ್ಪಕವಾಗಿ ನಡೆಯಬೇಕು. ಪ್ರತಿ ಹೆಕ್ಟೇರ್ಗೆ ₹5 ಸಾವಿರ ಬರ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳು ಘೋಷಿಸಿರುವ ಕ್ರಮದ ಅನುಷ್ಠಾನಕ್ಕೂ ಗಮನಹರಿಸಬೇಕು ಎಂದು ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಯೋಜನೆಗಳು, ಡಂಬಳ ತೋಟಗಾರಿಕೆ ಕಾಲೇಜಿನ ವರದಿ ಪರಿಶೀಲಿಸಿದ ಸಚಿವರು, ರೇಷ್ಮೆ ಹಾಗೂ ಪಶುಸಂಗೋಪನೆ ಇಲಾಖೆಗಳು ಅಪೂರ್ಣ ಮಾಹಿತಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪಶು ಆಸ್ಪತ್ರೆಗಳ ಸೇವೆ ಸುಧಾರಿಸುವಂತೆ ಹಾಗೂ ಪಾಲಿಕ್ಲಿನಿಕ್ ಪರಿಶೀಲಿಸುವಂತೆ ಸೂಚಿಸಿದರು.
ಹಮ್ಮಿಗಿ ಜಲಾಶಯದಲ್ಲಿ ಮುನಿರಾಬಾದ್ ಮಾದರಿಯಲ್ಲಿ ಮೀನುಮರಿ ಸಾಕಾಣಿಕೆ ಕೇಂದ್ರ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಸ್ತಾವನೆ ಪರಿಶೀಲಿಸುವಂತೆ ತಿಳಿಸಿದರು. ಸಿಂಗಟಾಲೂರು ಯೋಜನೆಯಡಿ ಹನಿ ನೀರಾವರಿ ಪ್ರದೇಶಗಳ ನಕ್ಷೆ ಸಿದ್ಧಪಡಿಸುವುದು ಹಾಗೂ ದೀರ್ಘಾವಧಿಯ ಚೆಕ್ಡ್ಯಾಂ ಯೋಜನೆ ರೂಪಿಸುವ ಬಗ್ಗೆಯೂ ಚರ್ಚಿಸಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅನುದಾನ, ವೆಚ್ಚ ಮತ್ತು ಕಾಮಗಾರಿಗಳ ಪ್ರಗತಿಯ ಕುರಿತು ಸಮರ್ಪಕ ಮಾಹಿತಿ ನೀಡದಿದ್ದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಭೆಗೆ ಗೈರುಹಾಜರಾಗಿ ಕಿರಿಯ ಅಧಿಕಾರಿಗಳನ್ನು ಕಳುಹಿಸಿದ್ದಕ್ಕೆ ಇಲಾಖೆಯ ಕಾರ್ಯದರ್ಶಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕ್ರಮಕ್ಕೆ ಸೂಚಿಸಿದರು. ಕಳೆದ ಮೂರು ವರ್ಷಗಳಲ್ಲಿ ನೆಟ್ಟ ಸಸಿಗಳ ಸಂಖ್ಯೆ ಹಾಗೂ ಅವುಗಳ ಪ್ರಸ್ತುತ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದರು. ಅರಣ್ಯ ಪ್ರದೇಶಕ್ಕೆ ತಾವೇ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಬೇಕು. ಕನ್ನಡ ಕಲಿಕೆಗೆ ಆದ್ಯತೆ ನೀಡುವುದರ ಜತೆಗೆ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದರು. ಅಕ್ಷರ ದಾಸೋಹ ಯೋಜನೆಯಡಿ 1,18,478 ಮಕ್ಕಳಿಗೆ ಆಹಾರ ಒದಗಿಸಲಾಗುತ್ತಿದ್ದು, ಶೇ.100ರಷ್ಟು ಪ್ರಗತಿ ಸಾಧಿಸಿರುವುದನ್ನು ಸಭೆಯಲ್ಲಿ ಪರಿಶೀಲಿಸಿದರು. ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಹಾಲಿನೊಂದಿಗೆ ಬಾದಾಮಿ ಪುಡಿ ನೀಡುವ ಪ್ರಸ್ತಾವನೆಗೂ ಸಕಾರಾತ್ಮಕವಾಗಿ ಸ್ಪಂದಿಸಿದರು.
ವಿಬಿ-ಜಿ ರಾಮ್ ಜಿ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಎರಡು ದಿನಗಳ ಕಾರ್ಯಾಗಾರ ಆಯೋಜಿಸುವಂತೆ ತಿಳಿಸಿದರು.
ಗಜೇಂದ್ರಗಡ ತಾಲೂಕಿನಲ್ಲಿ ಬಾಕಿ ಉಳಿದಿರುವ 578 ಭೂಸರ್ವೆ ಪ್ರಕರಣಗಳನ್ನು ವಿಶೇಷ ಅಭಿಯಾನದ ಮೂಲಕ ಒಂದು ತಿಂಗಳೊಳಗೆ, ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕಂದಾಯ ಇಲಾಖೆಗೆ ಗಡುವು ನೀಡಿದರು. ಎಲ್ಲ ಇಲಾಖೆಗಳು ಬಿಡುಗಡೆಯಾದ ಅನುದಾನ, ಮಾಡಿದ ವೆಚ್ಚ ಮತ್ತು ಬಾಕಿ ಉಳಿದಿರುವ ಮೊತ್ತದ ಸಂಪೂರ್ಣ ವಿವರ ಸಲ್ಲಿಸಬೇಕು. ನವೆಂಬರ್ 27ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕೆಡಿಪಿ ಸಭೆಗೆ ಕಡ್ಡಾಯವಾಗಿ ಪ್ರಗತಿ ವರದಿಯೊಂದಿಗೆ ಹಾಜರಾಗಬೇಕು.
ಸಭೆಗೆ ಬರುವಾಗ ಅಧಿಕಾರಿಗಳು ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳೊಂದಿಗೆ ಹಾಜರಾಗಬೇಕು. ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಸಾರ್ವಜನಿಕರಿಗೆ ಯೋಜನೆಗಳ ಪೂರ್ಣ ಪ್ರಯೋಜನ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ. ಕರ್ತವ್ಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಸಚಿವ ರಾಯರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.










