ಬೆಂಗಳೂರು: ಮಾಸಿಕ ₹15 ಸಾವಿರ ಗೌರವಧನ ಹಾಗೂ ₹5 ಲಕ್ಷ ನಿವೃತ್ತಿ ಇಡಿಗಂಟು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕಾರ್ಯಕರ್ತೆಯರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಲಿಖಿತ ಭರವಸೆ ನೀಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಜಾಗ ಸಾಲದೆ ರಸ್ತೆಗಿಳಿದ ಆಶಾಗಳು:
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಆವರಣದಲ್ಲಿ ಜಾಗದ ಕೊರತೆ ಎದುರಾಗಿದೆ. ಹೀಗಾಗಿ ಪ್ರತಿಭಟನಾಕಾರರು ಫ್ರೀಡಂ ಪಾರ್ಕ್ ಪಕ್ಕದ ಕಾಳಿದಾಸ ರಸ್ತೆ ಹಾಗೂ ಮುಂಭಾಗದ ಶೇಷಾದ್ರಿ ರಸ್ತೆಯಲ್ಲಿಯೂ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ.
ರಸ್ತೆಗಳ ಮೇಲೆ ಪ್ರತಿಭಟನಾಕಾರರು ಕುಳಿತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ಪೊಲೀಸರು ಎರಡೂ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರವನ್ನು ಬಂದ್ ಮಾಡಿದ್ದಾರೆ. ಇದರಿಂದ ಆ ಭಾಗದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಗಿದೆ.
ಕರ್ನಾಟಕದ ಆಶಾಗಳಿಗೆ ಸಿಗುತ್ತಿರುವುದು ₹8 ಸಾವಿರ ಮಾತ್ರ!
ಕರ್ನಾಟಕದಲ್ಲಿ ಸದ್ಯ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ₹5,000 ಹಾಗೂ ಕೇಂದ್ರ ಸರ್ಕಾರದಿಂದ ₹3,000 ಸೇರಿದಂತೆ ಒಟ್ಟು ₹8,000 ಗೌರವಧನ ನೀಡಲಾಗುತ್ತಿದೆ. ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ತಮಗೆ ಕಡಿಮೆ ಗೌರವಧನ ಸಿಗುತ್ತಿದೆ ಎಂಬುದು ಆಶಾ ಕಾರ್ಯಕರ್ತೆಯರ ಅಸಮಾಧಾನ.
ಆಶಾ ಕಾರ್ಯಕರ್ತೆಯರು ನೀಡಿರುವ ಮಾಹಿತಿಯ ಪ್ರಕಾರ, ಹರಿಯಾಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟು ₹15,000, ಕೇರಳದಲ್ಲಿ ರಾಜ್ಯ ಸರ್ಕಾರದಿಂದ ₹12,000 ಜೊತೆಗೆ ಕೆಲಸದ ಆಧಾರದ ಮೇಲೆ ಪ್ರೋತ್ಸಾಹಧನ, ಪಶ್ಚಿಮ ಬಂಗಾಳದಲ್ಲಿ ₹11,250 ಜೊತೆಗೆ ಪ್ರೋತ್ಸಾಹಧನ ಹಾಗೂ ಆಂಧ್ರಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟು ₹10,000 ಗೌರವಧನ ನೀಡಲಾಗುತ್ತಿದೆ.
ಆಶಾ ಕಾರ್ಯಕರ್ತೆಯರ 8 ಪ್ರಮುಖ ಬೇಡಿಕೆಗಳೇನು?
ಆಶಾ ಕಾರ್ಯಕರ್ತೆಯರು ಸರ್ಕಾರದ ಮುಂದೆ ಎಂಟು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.
1. ಮಾಸಿಕ ₹15 ಸಾವಿರ ಗೌರವಧನ: ಕರ್ನಾಟಕದ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ₹15,000 ಗೌರವಧನ ನಿಗದಿಪಡಿಸಬೇಕು.
2. ಸಮಸ್ತ ಆ್ಯಪ್ ಕೆಲಸದ ಒತ್ತಡಕ್ಕೆ ಬ್ರೇಕ್: ಸಮಸ್ತ ಆ್ಯಪ್ ಮೂಲಕ ಒತ್ತಾಯದ ಮೊಬೈಲ್ ಕೆಲಸವನ್ನು ಕೈಬಿಡಬೇಕು. ಇಲ್ಲವೇ ಮೊಬೈಲ್, ಸೂಕ್ತ ಪ್ರೋತ್ಸಾಹಧನ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
3. ಬಾಕಿ ನಿವೃತ್ತಿ ಇಡಿಗಂಟು ಬಿಡುಗಡೆ: ಈಗಾಗಲೇ ನಿವೃತ್ತರಾಗಿರುವ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಇಡಿಗಂಟಿನ ಹಣವನ್ನು ತಕ್ಷಣ ಪಾವತಿಸಬೇಕು.
4. ಆಶಾ ನಿಧಿ ಬಾಕಿ ಹಣ ಪಾವತಿ: ಆಶಾ ನಿಧಿಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರೋತ್ಸಾಹಧನಗಳನ್ನು ಬಿಡುಗಡೆ ಮಾಡಬೇಕು.
5. ಸುಗಮಕಾರರ ಮರುನೇಮಕ: ಆಶಾ ಸುಗಮಕಾರರನ್ನು ಮರುನೇಮಕ ಮಾಡಿ ಸೂಕ್ತ ವೇತನ ನೀಡಬೇಕು. ಬಾಕಿ ಇರುವ ಒಂದು ವರ್ಷದ ₹1,500 ಮೊತ್ತವನ್ನೂ ಪಾವತಿಸಬೇಕು.
6. ಎನ್ಐಒಎಸ್ ತರಬೇತಿ ಪ್ರೋತ್ಸಾಹಧನ: ಎನ್ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಹಾಗೂ ಸುಗಮಕಾರರಿಗೆ ಪ್ರತಿ ತರಬೇತಿಗೆ ₹5,000 ವಿಶೇಷ ಪ್ರೋತ್ಸಾಹಧನ ನೀಡಬೇಕು.
7. ತೀವ್ರ ಕಾಯಿಲೆ ಚಿಕಿತ್ಸೆಗೆ ನೆರವು: ತೀವ್ರ ಕಾಯಿಲೆಯಿಂದ ಬಳಲುವ ಚಿಕಿತ್ಸಾ ಅವಧಿಯಲ್ಲಿ ಕನಿಷ್ಠ ಮೂರು ತಿಂಗಳ ಗೌರವಧನ ಹಾಗೂ ನಿಗದಿತ ಪ್ರೋತ್ಸಾಹಧನ ನೀಡಬೇಕು.
8. ₹5 ಲಕ್ಷ ನಿವೃತ್ತಿ ಇಡಿಗಂಟು: ಆಶಾ ಕಾರ್ಯಕರ್ತೆಯರ ಸೇವಾ ನಿವೃತ್ತಿ ಇಡಿಗಂಟನ್ನು ಪಶ್ಚಿಮ ಬಂಗಾಳದ ಮಾದರಿಯಲ್ಲಿ ₹5 ಲಕ್ಷಕ್ಕೆ ಹೆಚ್ಚಿಸಬೇಕು.
ಈ ಎಂಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟ ಮುಂದುವರಿಸಿದ್ದಾರೆ. ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂಬ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ.










