ಹಾಸನ: ಚಿಕ್ಕಮಗಳೂರು-ಹಾಸನ ಗಡಿ ಭಾಗದಲ್ಲಿ ಇಬ್ಬರ ಸಾವಿಗೆ ಕಾರಣವಾಗಿವೆ ಎಂದು ಶಂಕಿಸಲಾಗಿರುವ ಎರಡು ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಗುರುವಾರವೂ ಮುಂದುವರಿದಿದೆ.
ಬುಧವಾರ ಇಡೀ ದಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನ ನಡೆಸಿದರೂ ಆನೆಗಳು ಸಿಗದೆ ತಪ್ಪಿಸಿಕೊಂಡಿವೆ.
ಕಳೆದ ಕೆಲವು ತಿಂಗಳುಗಳಿಂದ ಈ ಎರಡು ಸಲಗಗಳು ಜೊತೆಯಾಗಿಯೇ ಓಡಾಡುತ್ತಿವೆ. ಇವುಗಳ ದಾಳಿಯಿಂದ ಇಬ್ಬರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಹೀಗಾಗಿ ಮೊದಲು ಈ ಆನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಬುಧವಾರ ರಾತ್ರಿ ಅರೆಹಳ್ಳಿ ಮತ್ತು ಬಿಕ್ಕೋಡು ಭಾಗಗಳಲ್ಲಿ ಆನೆಗಳು ಓಡಾಡಿವೆ. ಒಂದು ಪ್ರದೇಶದಲ್ಲಿ ನಿಲ್ಲದೆ ನಿರಂತರವಾಗಿ ಸ್ಥಳ ಬದಲಿಸುತ್ತಿರುವುದರಿಂದ ಕಾರ್ಯಾಚರಣೆ ತಂಡಕ್ಕೆ ಅವುಗಳನ್ನು ಸೆರೆಹಿಡಿಯುವುದು ಸವಾಲಾಗಿದೆ.
ಕಳೆದ ಮೂರು ದಿನಗಳಿಂದ ಆನೆಗಳ ಸೆರೆ ಮತ್ತು ಸ್ಥಳಾಂತರ ಕಾರ್ಯಾಚರಣೆ ನಡೆಯುತ್ತಿದ್ದು, ಪುಂಡಾನೆಗಳು ಮಾತ್ರ ಸಿಬ್ಬಂದಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿವೆ.









