94 ಕ್ವಿಂಟಲ್ ಅಕ್ಕಿ, 16.24 ಕ್ವಿಂಟಲ್ ಗೋಧಿ ಹೆಚ್ಚುವರಿ ದಾಸ್ತಾನು ಪತ್ತೆ; ನಿಲಯ ಪಾಲಕಿಯ ಅಮಾನತು ಹಾಗೂ ಅಧಿಕಾರಿಗಳಿಗೆ ನೋಟಿಸ್ ನೀಡಲು ಆದೇಶ
ಗದಗ: ಗದಗ ಜಿಲ್ಲೆಯಲ್ಲಿ ಅನ್ನಭಾಗ್ಯ ಪಡಿತರ ವಿತರಣೆ ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿನ ಗಂಭೀರ ಲೋಪದೋಷಗಳು ಕರ್ನಾಟಕ ರಾಜ್ಯ ಆಹಾರ ಆಯೋಗದ ಪರಿಶೀಲನೆಯಲ್ಲಿ ಬಯಲಾಗಿವೆ. ಮುಂಡರಗಿ ಸಗಟು ಮಳಿಗೆಯಲ್ಲಿ 94 ಕ್ವಿಂಟಲ್ ಅಕ್ಕಿ, 16.24 ಕ್ವಿಂಟಲ್ ಗೋಧಿ ಹೆಚ್ಚುವರಿ ದಾಸ್ತಾನು ಪತ್ತೆಯಾಗಿದ್ದು, ಜೋಳದ ಲೆಕ್ಕದಲ್ಲೂ ಭಾರಿ ವ್ಯತ್ಯಾಸ ಕಂಡುಬಂದಿದೆ. ವಿದ್ಯಾರ್ಥಿನಿಯರ ನಿಲಯದಲ್ಲಿ ಕಳಪೆ ಊಟ, ಹಾಲಿನ ಕೊರತೆ ಹಾಗೂ ಹಾಜರಾತಿ ದಾಖಲೆಗಳಲ್ಲಿನ ಲೋಪ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್ ರದ್ದತಿ, ನಿಲಯ ಪಾಲಕಿಯ ಅಮಾನತು ಹಾಗೂ ಅಧಿಕಾರಿಗಳಿಗೆ ನೋಟಿಸ್ ನೀಡಲು ಆಯೋಗದ ಸದಸ್ಯ ಮಾರುತಿ ದೊಡ್ಡಲಿಂಗಣ್ಣವರ ಸೂಚಿಸಿದ್ದಾರೆ.

ನ.18 ಮತ್ತು 19ರಂದು ಜಿಲ್ಲೆಯ ವಿವಿಧೆಡೆ ಪರಿಶೀಲನೆ ನಡೆಸಿದ ಅವರು, ಮುಂಡರಗಿ ಎಪಿಎಂಸಿ ಯಾರ್ಡ್ನಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆಯಲ್ಲಿ ದಾಖಲೆ ಹಾಗೂ ಭೌತಿಕ ದಾಸ್ತಾನು ತಾಳೆ ಹಾಕಿದಾಗ 94 ಕ್ವಿಂಟಲ್ ಅಕ್ಕಿ ಮತ್ತು 16.24 ಕ್ವಿಂಟಲ್ ಗೋಧಿ ಹೆಚ್ಚುವರಿಯಾಗಿ ಪತ್ತೆಯಾಗಿದೆ. ದಾಖಲೆಗಳಲ್ಲಿ 17.33 ಕ್ವಿಂಟಲ್ ಜೋಳ ಉಳಿಕೆ ಎಂದು ನಮೂದಾಗಿದ್ದರೆ, ಭೌತಿಕವಾಗಿ 134.767 ಕ್ವಿಂಟಲ್ ಸಂಗ್ರಹವಿರುವುದು ಕಂಡುಬಂದಿದೆ. ಧಾನ್ಯಗಳಲ್ಲಿ ಹುಳುಗಳು ಕಾಣಿಸಿಕೊಂಡಿದ್ದು, ಸ್ವಚ್ಛತೆ ಕೊರತೆಯೂ ಕಂಡುಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಲಾಗಿದೆ.
ಮುಂಡರಗಿಯ ವಾರ್ಡ್ 1, 3 ಮತ್ತು 4ರ ಮೂರು ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯದಲ್ಲೂ ಮುಚ್ಚಿದ್ದರಿಂದ ಲೈಸೆನ್ಸ್ ರದ್ದತಿಗೆ ಸೂಚಿಸಲಾಗಿದೆ. ಗದಗದ ರಾಜೀವ್ ಗಾಂಧಿ ನಗರದ ಅಂಗಡಿ ಸಂಖ್ಯೆ 39 ಕೂಡ ಮುಚ್ಚಿರುವುದು ಕಂಡುಬಂದಿದ್ದು, ಅದರ ಲೈಸೆನ್ಸ್ ರದ್ದತಿಗೂ ಸೂಚಿಸಲಾಗಿದೆ.

ಮುಂಡರಗಿ ಸಮಾಜ ಕಲ್ಯಾಣ ಇಲಾಖೆಯ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ಅನ್ನದಲ್ಲಿ ಹುಳು, ನೀರಿನಂಥ ಸಾರು, ಹಾಲಿನ ಕೊರತೆ ಹಾಗೂ ಸ್ವಚ್ಛತೆಯ ಅಭಾವ ಕಂಡುಬಂದಿದೆ. ಸುಮಾರು 150 ವಿದ್ಯಾರ್ಥಿನಿಯರಿಗೆ ದಿನಕ್ಕೆ ಕೇವಲ ಒಂದು ಲೀಟರ್ ಹಾಲು ಖರೀದಿಸುತ್ತಿರುವುದು ಪರಿಶೀಲನೆಯಲ್ಲಿ ತಿಳಿದುಬಂದಿದೆ. ಹಾಜರಿಲ್ಲದ ವಿದ್ಯಾರ್ಥಿನಿಯರನ್ನೂ ಹಾಜರೆಂದು ದಾಖಲಿಸಿರುವ ಆರೋಪವಿದ್ದು, ನಿಲಯ ಪಾಲಕಿ ಸೋಫಿಯಾ ಬೇಗಂ ಅಮಾನತಿಗೆ ಸೂಚಿಸಲಾಗಿದೆ.
ಬೆಟಗೇರಿ-1ರ ಬಾಲಕರ ವಸತಿ ನಿಲಯದಲ್ಲಿ ಕಳಪೆ ಆಹಾರ, ಕುಡಿಯುವ ನೀರಿನ ಕೊರತೆ, ಬಾಯ್ಲರ್ ದುರಸ್ತಿ ಹಾಗೂ ಸ್ವಚ್ಛತೆಯ ಸಮಸ್ಯೆಗಳು ಕಂಡುಬಂದಿವೆ. ಗದಗದ ದೇವರಾಜ ಅರಸು ಹಿಂದುಳಿದ ವರ್ಗಗಳ ವಸತಿ ನಿಲಯದ ಪರಿಶೀಲನೆಗೆ ನಿಲಯ ಪಾಲಕರು ಹಾಗೂ ಅಧಿಕಾರಿಗಳು ಗೈರಾಗಿದ್ದರಿಂದ ಮೂವರಿಗೆ ಕಾರಣ ಕೇಳಿ ನೋಟಿಸ್ ನೀಡಲು ಸೂಚಿಸಲಾಗಿದೆ.
ಗದಗದ ಒಕ್ಕಲಿಗರ ಓಣಿಯ ರಾಚೋಟೇಶ್ವರ ಗ್ರಾಹಕರ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಗೆ ಸೂಕ್ತ ದಾಸ್ತಾನು ಸ್ಥಳಾವಕಾಶ ಕಲ್ಪಿಸುವಂತೆಯೂ ಆಯೋಗ ಸೂಚಿಸಿದೆ. ಪಡಿತರ ವಿತರಣೆ ಮತ್ತು ವಿದ್ಯಾರ್ಥಿಗಳ ಸೌಲಭ್ಯಗಳ ನಿರ್ವಹಣೆಯಲ್ಲಿ ಕಂಡುಬಂದಿರುವ ಲೋಪಗಳ ಕುರಿತು ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ.










