ಗದಗ: ತನ್ನ ಕರುಳ ಕುಡಿ ಬದುಕಿದೆಯೋ, ಇಲ್ಲವೋ ಎಂಬ ಅರಿವೂ ಇಲ್ಲದಂತೆ… ಮರಣ ಹೊಂದಿದ ಮರಿಯನ್ನು ಎದೆಗವಚಿಕೊಂಡು, ಕಂಕುಳಲ್ಲೇ ಹೊತ್ತುಕೊಂಡು ಓಡಾಡುತ್ತಿರುವ ತಾಯಿ ಕೋತಿಯ ದೃಶ್ಯ ಎಂತಹವರ ಮನಸ್ಸನ್ನೂ ಕಲುಕುವಂತಿದೆ. ಮಾತು ಬಾರದ ಮೂಕ ಪ್ರಾಣಿಯ ಮಮತೆಯ ಮುಂದೆ ಮನುಷ್ಯರ ಕರುಣೆಯೂ ಕಿರಿದಾಗಿ ಕಾಣುವಂತಹ ಮನಕಲಕುವ ಕ್ಷಣವಿದು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ತಾಯಿ ಕೋತಿಯ ಈ ಮನಕಲಕುವ ದೃಶ್ಯ ಕಂಡುಬಂದಿದೆ. ಮರಿ ಮೃತಪಟ್ಟಿದ್ದರೂ ಅದನ್ನು ಬಿಟ್ಟುಕೊಡಲು ಮನಸ್ಸಾಗದ ತಾಯಿ ಕೋತಿ, ತನ್ನ ಕರುಳ ಕುಡಿಯನ್ನು ಕಂಕುಳಲ್ಲಿಟ್ಟುಕೊಂಡೇ ಇತರ ಕೋತಿಗಳ ಗುಂಪಿನೊಂದಿಗೆ ಸುತ್ತಾಡುತ್ತಿದೆ.
https://www.facebook.com/share/v/19TNhpeYq7/
ಸಾಮಾನ್ಯವಾಗಿ ಪ್ರಾಣಿಗಳ ಸಹಜ ಬದುಕಿನಲ್ಲಿ ಸಾವು ಒಂದು ಸಹಜ ಪ್ರಕ್ರಿಯೆ. ಆದರೆ, ತಾಯಿಯ ಮಮತೆಗೆ ಮಾತ್ರ ಇಂತಹ ಯಾವುದೇ ಲೆಕ್ಕಾಚಾರವಿಲ್ಲ ಎಂಬುದನ್ನು ಈ ದೃಶ್ಯ ಮನದಟ್ಟು ಮಾಡಿಕೊಡುವಂತಿದೆ. ಮರಿ ಮೃತಪಟ್ಟಿದೆ ಎಂಬ ಅರಿವಿಲ್ಲದೆಯೋ ಅಥವಾ ಅದನ್ನು ಕಳೆದುಕೊಂಡ ನೋವನ್ನು ಒಪ್ಪಿಕೊಳ್ಳಲಾಗದೆಯೋ ಎಂಬಂತೆ ತಾಯಿ ಕೋತಿ ತನ್ನ ಮರಿಯನ್ನು ಎದೆಗವಚಿಕೊಂಡು ಓಡಾಡುತ್ತಿರುವುದು ನೋಡುಗರ ಮನಸ್ಸನ್ನು ಭಾರವಾಗಿಸಿದೆ.
ಮರಿಯನ್ನು ಕ್ಷಣಕಾಲವೂ ದೂರ ಮಾಡದೆ, ತನ್ನ ಮಡಿಲಲ್ಲೇ ಇಟ್ಟುಕೊಂಡು ಓಡಾಡುತ್ತಿರುವ ತಾಯಿ ಕೋತಿಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಕಂಡ ಸ್ಥಳೀಯರು ಮೂಕ ಪ್ರಾಣಿಯ ತಾಯ್ತನದ ಮಮತೆಗೆ ಭಾವುಕರಾಗಿದ್ದಾರೆ.
ಮನುಷ್ಯರ ಬದುಕಿನಲ್ಲಿ ತಾಯಿಯ ಪ್ರೀತಿ, ಮಮತೆ ಮತ್ತು ಕರುಣೆಯ ಬಗ್ಗೆ ನೂರಾರು ಮಾತುಗಳಿವೆ. ಆದರೆ, ಯಾವುದೇ ಭಾಷೆಯಿಲ್ಲದೆ, ಭಾವನೆಗಳನ್ನು ವ್ಯಕ್ತಪಡಿಸಲು ಮಾತುಗಳಿಲ್ಲದೆ ತನ್ನ ವರ್ತನೆಯ ಮೂಲಕವೇ ತಾಯಿಪ್ರೀತಿಯ ಗಾಢತೆಯನ್ನು ಸಾರುತ್ತಿರುವ ಈ ಮೂಕ ಪ್ರಾಣಿಯ ದೃಶ್ಯ ಮಾತ್ರ ನಿಜಕ್ಕೂ ಕಣ್ಣಂಚಲ್ಲಿ ನೀರು ತರಿಸುವಂತಿದೆ.
ಮಾತುಗಳಿಲ್ಲದಿದ್ದರೂ ಮಮತೆಗೆ ಭಾಷೆಯ ಹಂಗಿಲ್ಲ. ಕರುಳ ಕುಡಿಯ ಮೇಲಿನ ತಾಯಿಯ ಪ್ರೀತಿ ಮನುಷ್ಯರಿಗಷ್ಟೇ ಸೀಮಿತವಲ್ಲ ಎಂಬುದಕ್ಕೆ ಮುಂಡರಗಿಯ ಈ ದೃಶ್ಯವೇ ಸಾಕ್ಷಿ.









