ತುಮಕೂರು: ಮಗನನ್ನು ಹೆತ್ತು ಹೊತ್ತು ಬೆಳೆಸಿದ ತಾಯಿಯೇ ಆತನ ಜೀವ ತೆಗೆದಿರುವ ಘಟನೆ ತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ನಡೆದಿದೆ.
ಮನೆಯ ಮುಂದೆ ಮಲಗಿದ್ದ ಮಗ ಮುತ್ತುರಾಜ್ನನ್ನು ತಾಯಿ ಶಿವಮ್ಮ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಕೊಲೆ ರಹಸ್ಯವಾಗಿಯೇ ಉಳಿದಿದ್ದರೂ, ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣಕ್ಕೆ ಮಹತ್ವದ ಸುಳಿವು ನೀಡಿವೆ.
ರಾತ್ರಿ ಮನೆಯ ಮುಂದೆ ಮಲಗಿದ್ದ ಮುತ್ತುರಾಜ್ ಬೆಳಗ್ಗೆ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಪರಿಚಿತರು ಹಲ್ಲೆ ನಡೆಸಿ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಶಂಕಿಸಿದ್ದರು. ಆದರೆ ತನಿಖೆ ಆರಂಭಿಸಿದ ತುಮಕೂರು ಗ್ರಾಮಾಂತರ ಪೊಲೀಸರಿಗೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ವೇಳೆ ಅಚ್ಚರಿಯ ಸಂಗತಿ ಗೊತ್ತಾಗಿದೆ.
ಸಿಸಿಟಿವಿ ದೃಶ್ಯಗಳಲ್ಲಿ ತಾಯಿ ಶಿವಮ್ಮ ಅವರೇ ಮಗನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿರುವುದು ಸೆರೆಯಾಗಿತ್ತು. ಈ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಶಿವಮ್ಮ ಅವರನ್ನು ಬಂಧಿಸಿದ್ದಾರೆ.
ವಿವಾಹಿತ ಮಹಿಳೆಯೊಂದಿಗೆ ಮದುವೆಯಾಗುವ ಹಠ:
ಮುತ್ತುರಾಜ್ ಊರಿನ ವಿವಾಹಿತ ಮಹಿಳೆಯೊಬ್ಬರೊಂದಿಗೆ ಸಂಬಂಧ ಹೊಂದಿದ್ದರು. ಆಕೆಗೆ ಮಗು ಇದ್ದರೂ ಆಕೆಯನ್ನೇ ಮದುವೆಯಾಗುವುದಾಗಿ ಮುತ್ತುರಾಜ್ ಹಠ ಹಿಡಿದಿದ್ದರು ಎನ್ನಲಾಗಿದೆ. ಆದರೆ ಮಗನ ನಿರ್ಧಾರಕ್ಕೆ ತಾಯಿ ಶಿವಮ್ಮ ಒಪ್ಪಿರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿದುಬಂದಿದೆ.
ಮಗ ತನ್ನ ಮಾತು ಮೀರಿ ಮದುವೆಗೆ ಮುಂದಾಗುತ್ತಿದ್ದಾನೆ ಎಂಬ ಕಾರಣಕ್ಕೆ ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ ಶಿವಮ್ಮ, ರಾತ್ರಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಹಲ್ಲೆ ತೀವ್ರಗೊಂಡು ಮುತ್ತುರಾಜ್ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಏನೂ ಅರಿಯದವರಂತೆ ವರ್ತಿಸಿದ್ದ ತಾಯಿಯ ಕೃತ್ಯ ಸಿಸಿಟಿವಿಯಿಂದ ಬಯಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.









