ಮಧ್ಯರಾತ್ರಿ 8ರಿಂದ 10 ಬೈಕ್ಗಳಲ್ಲಿ ಬಂದು ಬೇಟೆ ಆರೋಪ, ಹೊಲಗಳಲ್ಲೇ ಪ್ರಾಣಿಗಳ ಅವಶೇಷ ಬಿಟ್ಟು ಪರಾರಿ
ಲಕ್ಷ್ಮೇಶ್ವರ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ, ಬಸಾಪುರ ಹಾಗೂ ಧರ್ಮಾಪುರ ಗ್ರಾಮಗಳ ಜಮೀನುಗಳಲ್ಲಿ ಜಿಂಕೆ ಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದು ತಿಂಗಳಿಂದ ಮಧ್ಯರಾತ್ರಿ ವೇಳೆ ನಿರಂತರವಾಗಿ ಅಕ್ರಮ ಬೇಟೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 8ರಿಂದ 10 ಬೈಕ್ಗಳಲ್ಲಿ ಗುಂಪಾಗಿ ಬರುವ ದುಷ್ಕರ್ಮಿಗಳು ಮಚ್ಚು, ಲಾಂಗ್ ಸೇರಿದಂತೆ ಮಾರಕ ಆಯುಧಗಳನ್ನು ಬಳಸಿ ಜಿಂಕೆಗಳನ್ನು ಬೇಟೆಯಾಡಿ, ಮಾಂಸ ಹಾಗೂ ಚರ್ಮ ತೆಗೆದುಕೊಂಡು ಹೋಗುತ್ತಿದ್ದಾರೆ. ಜಿಂಕೆಗಳ ಕಾಲು, ಕೂದಲು, ಕರುಳು ಸೇರಿದಂತೆ ಅವಶೇಷಗಳನ್ನು ಹೊಲಗಳಲ್ಲೇ ಬಿಟ್ಟು ಪರಾರಿಯಾಗುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಬರಗಾಲದ ಸಂಕಷ್ಟದ ನಡುವೆಯೂ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ. ಅದರಲ್ಲೂ ಮೆಣಸಿನಕಾಯಿ ಬೆಳೆಗೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸಿ ಬೆಳೆ ರಕ್ಷಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾತ್ರಿ ವೇಳೆ ಜಮೀನುಗಳಲ್ಲಿ ಬೇಟೆಗಾರರ ಹಾವಳಿ ರೈತರ ನೆಮ್ಮದಿಯನ್ನೇ ಕಸಿದುಕೊಂಡಿದೆ.
ಬೆಳೆಗಳ ರಕ್ಷಣೆಗಾಗಿ ರಾತ್ರಿ ಕಾವಲು ಕಾಯುವ ರೈತರು ಬೇಟೆಗಾರರ ಚಟುವಟಿಕೆಗಳನ್ನು ಕಣ್ಣಾರೆ ಕಂಡಿದ್ದಾರೆ ಎನ್ನಲಾಗಿದೆ. ಆದರೆ, ಗುಂಪಾಗಿ ಬರುವ ದುಷ್ಕರ್ಮಿಗಳ ಕೈಯಲ್ಲಿ ಮಾರಕ ಆಯುಧಗಳಿರುವುದರಿಂದ ಅವರನ್ನು ಪ್ರಶ್ನಿಸಲೂ ರೈತರು ಭಯಪಡುತ್ತಿದ್ದಾರೆ. ಟಾರ್ಚ್ ಬೆಳಕು ಬೀರಿದರೆ ರೈತರ ಮುಖಕ್ಕೆ ಬೆಳಕು ಹಾಯಿಸಿ ಸ್ಥಳದಿಂದ ಪರಾರಿಯಾಗುತ್ತಿದ್ದಾರೆ. ಹೀಗಾಗಿ ಜಮೀನುಗಳಲ್ಲಿ ರಾತ್ರಿ ಕಾವಲು ಕಾಯುವುದೂ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ರೈತರಾದ ಸಹದೇವಪ್ಪ ಹುಣಸಿಮರದ, ಬುಡ್ಡೇಸಾಬ ತೆಗ್ಗಿನಮನಿ ಮತ್ತಿತರರು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಂಕೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆ ಹೊಂದಿರುವ ಪ್ರಾಣಿಗಳಾಗಿದ್ದು, ಅವುಗಳ ಬೇಟೆ ಗಂಭೀರ ಕಾನೂನುಬಾಹಿರ ಅಪರಾಧವಾಗಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ವನ್ಯಜೀವಿಗಳ ಸಂರಕ್ಷಣೆ ಹಾಗೂ ರೈತರ ಸುರಕ್ಷತೆ ಕುರಿತು ಆತಂಕ ಮೂಡಿಸಿದೆ. ಆಯುಧಧಾರಿ ಗುಂಪುಗಳ ಸಂಚಾರದಿಂದ ರೈತರು ತಮ್ಮ ಜಮೀನುಗಳಲ್ಲಿ ನಿರ್ಭೀತಿಯಿಂದ ಇರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮಗೇರಿ ಗ್ರಾಮದ ರೈತ ಸೋಮಣ್ಣ ಬೆಟಗೇರಿ ಈ ಕುರಿತು ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ರಾತ್ರಿ ಗಸ್ತು ಹೆಚ್ಚಿಸಬೇಕು. ಅಕ್ರಮ ಬೇಟೆಯಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜಿಂಕೆಗಳ ಸಂರಕ್ಷಣೆಯ ಜತೆಗೆ ರೈತರಿಗೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಶೀಲಿಸಿ ಕ್ರಮ: ಆರ್ಎಫ್ಒ ರೇಣುಕಮ್ಮ
ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಆರ್ಎಫ್ಒ ರೇಣುಕಮ್ಮ ಎ., ರಾಮಗೇರಿ, ಬಸಾಪುರ ಹಾಗೂ ಧರ್ಮಾಪುರ ಭಾಗಗಳಲ್ಲಿ ಜಿಂಕೆಗಳ ಬೇಟೆ ನಡೆಯುತ್ತಿರುವ ಕುರಿತು ಈವರೆಗೆ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ. ಇದೀಗ ರೈತರು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಲಾಗುವುದು. ಅಕ್ರಮವಾಗಿ ಜಿಂಕೆ ಬೇಟೆಯಾಡುತ್ತಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.








