ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿದೆ.
ನೋವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಮನವಿಗೆ ಬೆಂಗಳೂರಿನ ಸಿಸಿಎಚ್-59 ನ್ಯಾಯಾಲಯ ಸ್ಪಂದಿಸಿದ್ದು, ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಕೊಡಿಸಲು ಅನುಮತಿ ನೀಡಿದೆ.
ದರ್ಶನ್ಗೆ ಬೆನ್ನುನೋವು ಹೆಚ್ಚಾಗಿರುವ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅವಕಾಶ ನೀಡಬೇಕು ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಜೈಲಿನ ವೈದ್ಯರು ನೀಡಿದ್ದ ಆರೋಗ್ಯ ವರದಿಯನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಅರ್ಜಿ ಹಾಗೂ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯ, ಖಾಸಗಿ ಆಸ್ಪತ್ರೆಯ ಬದಲಿಗೆ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಚಿಕಿತ್ಸೆ ಕೊಡಿಸುವಂತೆ ಆದೇಶಿಸಿದೆ.
ನ್ಯಾಯಾಲಯದ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಿದ ಬಳಿಕ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ಪ್ರಕ್ರಿಯೆ ನಡೆಯಲಿದೆ. ಇಂದೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ವಿಕ್ಟೋರಿಯಾ ಆಸ್ಪತ್ರೆಯ ಜೈಲು ವಾರ್ಡ್ನಲ್ಲಿ ದರ್ಶನ್ಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿನ ವೈದ್ಯರು ಫಿಸಿಯೋಥೆರಪಿ ಚಿಕಿತ್ಸೆ ಆರಂಭಿಸಲಿದ್ದಾರೆ.







