ಮಂಗನ ಮಡಿಲಲ್ಲಿ ನಾಯಿಮರಿ; ಇದೆಂಥಾ ಮೂಕಪ್ರೀತಿ?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಬಾಂಧವ್ಯ, ಪ್ರೀತಿ-ಮಮಕಾರಗಳ ಬಂಧ ಕೇವಲ ಮನುಷ್ಯ ಜಾತಿಗಷ್ಟೇ ಸೀಮಿತವಲ್ಲ. ನಮಗಿಂತ ಹೆಚ್ಚಾಗಿ ಇತರ ಮೂಕಪ್ರಾಣಿಗಳು ಇಂಥ ಭಾವನೆಗಳನ್ನು ಹೊಂದಿವೆ. ಕೆಲವೊಮ್ಮೆ ಈ ಮೂಕಪ್ರಾಣಿಗಳು ತೋರುವ ಇಂಥ ಸಂಬಂಧಗಳ ಬೆಸುಗೆ ಅಚ್ಚರಿಯನ್ನೂ ಮೂಡಿಸುತ್ತದೆ. ಹಸುವೊಂದು ಪುಟ್ಟ ನಾಯಿಮರಿಗೆ ಹಾಲೂಣಿಸುತ್ತದೆ. ನಾಯಿಯೊಂದು ಬೆಕ್ಕಿನ ಮರಿಯನ್ನು ತನ್ನದೇ ಕರುಳ ಬಳ್ಳಿಯೆಂಬಂತೆ ಎದೆಗವಚಿ ನಡೆಯುತ್ತದೆ. ಇದೀಗ ಹೇಳಹೊರಟಿರುವ ಈ ವಿದ್ಯಮಾನವೂ ಅದೇ ವಿಧದ್ದೆನ್ನಬಹುದು.

ಮೂರ್ನಾಲ್ಕು ದಿನಗಳಿಂದ ಮಂಗವೊಂದು ಅದಿನ್ನೂ ಕಣ್ಣೇ ತೆರೆದಿರದ ಪುಟ್ಟ ನಾಯಿ ಮರಿಯೊಂದನ್ನು ತನ್ನದೇ ಸಂತಾನವೇನೋ ಎಂಬಂತೆ ಹೊತ್ತು ಓಡಾಡುತ್ತಿದೆ.

ವಿವೇಕಾನಂದ ನಗರದ ನಾಲ್ಕನೇ ಕ್ರಾಸ್ ನ ಸುತ್ತಮುತ್ತ ಹೀಗೆ ನಾಯಿಮರಿಯನ್ನು ಹೊತ್ತು ಓಡಾಡುತ್ತಿರುವ ಮಂಗ ಏನೇ ಪ್ರಯತ್ನಪಟ್ಟರೂ ಮರಿಯನ್ನು ಬಿಡಲು ತಯಾರಿಲ್ಲ. ಸುತ್ತಲಿನ ಹಲವರು ವಿಷಯವೇನೆಂದೇ ಅರ್ಥವಾಗದೆ, ಮಂಗ ಆ ಪುಟ್ಟ ನಾಯಿಗೇನಾದರೂ ತೊಂದರೆ ಮಾಡೀತು ಎಂಬ ಕಳಕಳಿಯಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ತೆಂಗಿನ ಕಾಯಿ ಚೂರು, ಬಾಳೆಹಣ್ಣು ಕೊಟ್ಟಾದರೂ ಆ ನಾಯಿಮರಿಯನ್ನು ಬಿಡಿಸೋಣವೆಂದುಕೊಂಡರೆ, ಮಂಗ ಇನ್ನೂ ಚಾಲಾಕಿ. ಮರಿಯನ್ನು ಮಡಿಲಲ್ಲೋ, ಕಾಲ ಕೆಳಗೆ ಅದುಮಿಟ್ಟುಕೊಂಡೇ ನೀಡಿದ ಹಣ್ಣಿಗೆ ಕೈಚಾಚಿ ಪಡೆಯುತ್ತಿದೆಯೇ ಹೊರತೂ ನಾಯಿಮರಿಯನ್ನು ಬಿಡಲೊಪ್ಪದು.

ಈ ಪ್ರದೇಶದಲ್ಲಿ ಮನೆಗಳು ಒತ್ತೊತ್ತಾಗಿರುವಲ್ಲಿ ಟೆರೇಸ್ ನಿಂದ ಟೆರೇಸಿಗೆ ದಾಟುತ್ತ ಮೂರ್ನಾಲ್ಕು ದಿನಗಳಿಂದ ಇದೇ ಪ್ರದೇಶದಲ್ಲಿ ಓಡಾಡುತ್ತಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ನಾಯಿಮರಿ ಹಸಿವೆಯಿಂದಲೋ, ತಾಯಿ ಮಡಿಲಿಂದ ತಪ್ಪಿಸಿಕೊಂಡಿದ್ದಕ್ಕೋ ದಿನವಿಡೀ ಕಿರುಚುತ್ತಲೇ ಇದೆ. ಯಾರೂ ಬೆದರಿಸಿ, ಹೊಡೆಯುವ ಪ್ರಯತ್ನವನ್ನು ಮಾಡಹೊರಟಿಲ್ಲ. ಮಂಗವೂ ಆ ನಾಯಿಮರಿಗೆ ಯಾವುದೇ ತೊಂದರೆ ಮಾಡಿದ ಹಾಗಿಲ್ಲ. ಮಹಡಿಯ ಮೇಲೆ ಧಾನ್ಯ ಅಥವಾ ಬೇರೆ ಆಹಾರ ಪದಾರ್ಥಗಳನ್ನು ಒಣಗಿಸಿದ್ದರೆ, ತಿಂದು ಹೋಗುತ್ತದೆ. ಮಲಗುವಾಗಲೂ ಪಕ್ಕದಲ್ಲೇ ಮಲಗಿಸಿಕೊಳ್ಳುತ್ತದೆ. ಮತ್ತೆ ಬೇರೆಡೆ ಹೋಗುವಾಗಲೂ ಬಾಯಲ್ಲಿ ಕಚ್ಚಿಕೊಂಡೇ ಅಡ್ಡಾಡುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಈ ಕೆಂಪುಮೂತಿಯ ಕೋತಿಯ ಭಾವನೆ, ಈಗಿನ್ನೂ ಕಣ್ಣೂ ತೆರೆಯದ ಪುಟ್ಟ ನಾಯಿಮರಿಯ ಗೋಳು ಕಂಡವರು ಮರುಗುವಂತಿದೆ. ಈ ಪ್ರಾಣಿಯದು ಇದೆಂಥಾ ಮೂಕ ಪ್ರೀತಿ ಎಂದುಕೊಳ್ಳುವಂತಿದೆ.


Spread the love

LEAVE A REPLY

Please enter your comment!
Please enter your name here