ಭಾವೈಕ್ಯತೆಗೆ ಸಾಕ್ಷಿಯಾದ ಗೋಕುಲ ಪೊಲೀಸ್ ಠಾಣೆ
ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಅಲ್ಲಿ ಈ ಸಲದ ಗಣೇಶೋತ್ಸವ ವಿಭಿನ್ನವಾಗಿತ್ತು. ಒಂದೆಡೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಾಕಷ್ಟು ವಿರೋಧಗಳು, ಗೊಂದಲಗಳು, ತಲೆಬಿಸಿಗಳು ಸೃಷ್ಟಿಯಾಗಿ ತುಸು ಬಿಸಿಯ ವಾತಾವರಣವೇ ಕಂಡುಬರುತ್ತಿದ್ದರೆ, ಇಂಥ ವಾತಾವರಣವನ್ನು ನಿಯಂತ್ರಿಸಬೇಕಾದ ಪೊಲೀಸ್ ಸಿಬ್ಬಂದಿ ಹೈರಾಣಾಗಿದ್ದಂತೂ ಸುಳ್ಳಲ್ಲ. ಆದರೆ, ಅದೇ ಹುಬ್ಬಳ್ಳಿಯ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಮಾತ್ರ ಅಖಂಡ ಭಾರತದ ಕನಸು ನನಸಾದಂತೆ ಭಾಸವಾಗಿತ್ತು.

ಜಾತಿ-ಧರ್ಮಗಳ ನಡುವಿನ ಭಿನ್ನತೆಯನ್ನು ಬಗ್ಗಿಸಿ ಏಕತೆಯನ್ನು ಸಾರುವಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳೂ ಕೈಜೋಡಿಸಿ ಮಾದರಿಯಾದರು. ನಮ್ಮದೆಲ್ಲವೂ ಒಂದೇ ಕುಲವೆಂದು ಸಮಾಜಕ್ಕೊಂದು ಉತ್ತಮ ಸಂದೇಶವನ್ನೂ ನೀಡಿದರು.
ಇಡೀ ಠಾಣೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ತಳಿರು-ತೋರಣಗಳಿಂದ ಸಿಂಗರಿಸಲ್ಪಟ್ಟ ಪೊಲೀಸ್ ಠಾಣೆ ತನ್ನ ಅಸಲೀ ರೂಪವನ್ನೇ ಮರೆಮಾಚಿಕೊಂಡಿತ್ತು. ಅಚ್ಚಬಿಳಿಯ ಪಂಚೆ-ಅಂಗಿ, ಶಲ್ಯ ಧರಿಸಿದ ಠಾಣೆಯ ಸಿಬ್ಬಂದಿಗಳು ಅತ್ತಿಂದಿತ್ತ ಓಡಾಡುತ್ತ ಹಬ್ಬದ ತಯಾರಿಯಲ್ಲಿ ತೊಡಗಿದ್ದ ದೃಶ್ಯ ಒಂದೆಡೆಯಾದರೆ, ಠಾಣೆಯ ಇನ್ಸ್‌ಪೆಕ್ಟರ್ ಜಾಕೀರ್ ಪಾಷಾ ಕಾಲಿಮಿರ್ಚಿ ಸ್ವತಃ ವಿಘ್ನವಿನಾಶಕ ಗಣಪತಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಹೊತ್ತುತಂದರು. ತಲೆಯ ಮೇಲೆ ಕೇಸರಿ ಟೋಪಿ, ಎಲ್ಲರ ಹಣೆಯಲ್ಲಿ ಕೇಸರಿ ತಿಲಕ, ಎಲ್ಲರ ಬಾಯಲ್ಲೂ ಭಕ್ತಿ ಶ್ಲೋಕ-ಭಜನೆಗಳು. ಇಲ್ಲಿ ಯಾರದ್ದು ಯಾವ ಜಾತಿ, ಯಾವ ಕುಲ?!
ಪ್ರತಿಷ್ಠಾಪನೆಯೂ ವಿದ್ಯುಕ್ತವಾಗಿ ನೆರವೇರಿತು. ಸಿಬ್ಬಂದಿಗಳೆಲ್ಲರೂ ಸೇರಿ ಭಜನೆ ಪದಗಳನ್ನು ಹಾಡಿ ಏಕತೆಯ ಸಂದೇಶ ಸಾರಿದರು. ಜಾತಿ-ಧರ್ಮಗಳ ಸಂಕೋಲೆಗಿಂತ ಭಾವೈಕ್ಯತೆಯ ಒಗ್ಗಟ್ಟೇ ಮುಖ್ಯ ಎಂಬುದನ್ನು ಸ್ವತಃ ಬಿಂಬಿಸಿ ಮಾದರಿಯಾದರು. ಪ್ರಸಾದ ಹಂಚಿ ಪುನೀತರಾದರು, ಒಟ್ಟಾಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಹೇಳದೇ ಮಾಡುವನು ರೂಢಿಯೊಳಗುತ್ತಮನು ಎಂಬಂತೆ, ಹೇಳಿ ತಿದ್ದುವದಕ್ಕಿಂತ ಮಾಡಿ ಮಾದರಿಯಾಗುವದೇ ಲೇಸು ಎಂಬ ಸಂದೇಶವನ್ನೂ ಸಮಾಜಕ್ಕೆ ತಿಳಿಸಿದ್ದು ಮಾದರೀ ಕಾರ್ಯವೆಂಬ ಮೆಚ್ಚುಗೆಗೂ ಪಾತ್ರವಾದರು. ಈ ವಿಭಿನ್ನ ಕಾರ್ಯಕ್ಕೆ ಧ್ವನಿಯಾದವರು ಠಾಣೆಯ ಇನ್ಸ್‌ಪೆಕ್ಟರ್ ಜಾಕೀರ್ ಪಾಷಾ ಕಾಲಿಮಿರ್ಚಿ ಎಂಬುದನ್ನು ಬೇರೆ ಹೇಳಬೇಕಿಲ್ಲ ತಾನೆ?!
ಒಟ್ಟಿನಲ್ಲಿ, ಹುಬ್ಬಳ್ಳಿಯ ಗೋಕುಲ್ ರಸ್ತೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿಭಿನ್ನವಾಗಿ ಗಣೇಶೋತ್ಸವ ಆಚರಿಸಿ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ್ದು ಮಾದರಿ ಕಾರ್ಯ ಎಂಬ ಮೆಚ್ಚುಗೆ ಎಲ್ಲೆಡೆ ವ್ಯಕ್ತವಾಗಿದೆ.
ಹಬ್ಬಗಳ ಸಾಲಿನಲ್ಲಿ ಗಣೇಶೋತ್ಸವ ಮೊದಲನೆಯ ಹಾಗೂ ಅದ್ಧೂರಿಯಾಗಿ ನಾಡಿನಾದ್ಯಂತ ಆಚರಿಸಲ್ಪಡುವ ಹಬ್ಬ. ಭಾರತದ ಭವ್ಯ ಪರಂಪರೆಯಲ್ಲಿ ಗಣೇಶೋತ್ಸವಕ್ಕೆ ಅಗ್ರಸ್ಥಾನವಿದೆ. ಭಾಷೆ, ಜಾತಿ, ಧರ್ಮಗಳಲ್ಲಿ ವಿವಿಧತೆಯನ್ನು ಹೊಂದಿದ್ದರೂ ಬಹುತೇಕ ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ಈ ಹಬ್ಬವನ್ನು ಆಚರಿಸುತ್ತ ಬರಲಾಗಿದೆ. ಗೋಕುಲ ಪೊಲೀಸ್ ಸ್ಟೇಷನ್ನಲ್ಲಿ ಇದು ನನ್ನ ಎರಡನೆಯ ಗಣೇಶೋತ್ಸವ. ಇಲ್ಲಿ ಎಲ್ಲರದ್ದೂ ಒಂದೇ ಜಾತಿ. ಅದು ಖಾಕಿ ಜಾತಿ. ಯಾವುದೇ ಜಾತಿ-ಧರ್ಮದಿಂದ ಬಂದಿದ್ದರೂ ನಾವೆಲ್ಲ ಭಾರತೀಯರು. ಎಲ್ಲ ಕೆಲಸ ಕಾರ್ಯಗಳ ನಡುವೆಯೂ ಎಲ್ಲ ಸಿಬ್ಬಂದಿಗಳು ಸೇರಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಸತ್ಯನಾರಾಯಣ ಪೂಜೆಯನ್ನೂ ನೆರವೇರಿಸಿದ್ದೇವೆ. ವರ್ಷದ ಎಲ್ಲಾ ದಿನವೂ ಕೆಲಸಗಳೇನು ಕಡಿಮೆಯಿಲ್ಲ. ಆದರೆ, ಸರ್ವರಿಗೂ ಒಳಿತಾಗಲಿ ಎಂಬ ಉದ್ದೇಶದಿಂದ ಎಲ್ಲರೂ ಕೂಡಿ ಹಬ್ಬ ಆಚರಿಸಿ ನಮ್ಮ ಕಾರ್ಯದಲ್ಲಿ ತೊಡಗುತ್ತಿದ್ದೇವೆ.
-ಜಾಕೀರ್ ಪಾಷಾ ಕಾಲಿಮಿರ್ಚಿ. ಇನ್ಸ್‌ಪೆಕ್ಟರ್, ಗೋಕುಲ ರೋಡ್ ಪೊಲೀಸ್ ಠಾಣೆ