ವಿಜಯಸಾಕ್ಷಿ ಸುದ್ದಿ, ನರಗುಂದ
Advertisement
ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗದಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ನವಿಲು ತೀರ್ಥ ಡ್ಯಾಂನಿಂದ ನಿನ್ನೆ ರಾತ್ರಿ 12,500 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ನರಗುಂದ ತಾಲೂಕಿನ ಹಲವು ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಲು ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.
ನರಗುಂದ ತಾಲೂಕಿನ ನದಿಪಾತ್ರದ ಗ್ರಾಮಗಳಾದ ಲಕಮಾಪೂರ, ಬೆಳ್ಳೇರಿ, ವಾಸನ, ಶಿರೋಳ, ಕೊಣ್ಣೂರ, ಬೂದಿಹಾಳ ಹಾಗೂ ಕಲ್ಲಾಪೂರ ಸೇರಿದಂತೆ ಎಂಟು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಧ್ವನಿ ವಾರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಮಲಪ್ರಭಾ ನದಿ ತೀರಕ್ಕೆ ಜನ, ಜಾನುವಾರು ಹೋಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ನರಗುಂದ ತಹಸೀಲ್ದಾರ್ ಎ ಡಿ ಅಮರವಾದಗಿ ಮಾಹಿತಿ ನೀಡಿದ್ದಾರೆ. ನವಿಲು ತೀರ್ಥದಿಂದ ಬಿಡುಗಡೆಗೊಳ್ಳುವ ನೀರಿನ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.