ವಿಜಯಸಾಕ್ಷಿ ಸುದ್ದಿ, ಮುಂಡರಗಿ
ನಮ್ಮ ಬದುಕಿನಲ್ಲಿ ಸರ್ವವೂ ವಿಧಿಲಿಖಿತ. ಎಲ್ಲವೂ ನಾವೆಣಿಸಿದಂತೆ ನಡೆಯುತ್ತದೆಯೆಂತಾದರೆ, ಮನುಷ್ಯನ ಜೀವನ ಹೀಗಿರುತ್ತಲೇ ಇರಲಿಲ್ಲ. ಕಷ್ಟ ಕೋಟಲೆಗಳು, ನೋವುಗಳು, ಬಡತನ, ಸಂಕಷ್ಟ ಎಲ್ಲವುಗಳಿಂದಲೂ ಅತೀತರಾಗಿ ಬದುಕಿಬಿಡಬಹುದಿತ್ತು. ಆದರೆ, ಹಾಗಲ್ಲವಲ್ಲ?! ನಾವು ಲೆಕ್ಕ ಹಾಕುವುದು, ಕನಸು ಕಾಣುವುದು ಒಂದಾದರೆ, ವಿಧಿಯಾಟ ಅದಕ್ಕೆ ತದ್ವಿರುದ್ಧ.
ಕೆಲವರ ಬಾಳಲ್ಲಿ ದುರಾದೃಷ್ಟವೆನ್ನುವದು ಅವರಿಗಿಂತಲೂ ಮುಂದೆಯೇ ಇರುತ್ತದೆ. ಈ ಇಬ್ಬರು ಹುಮ್ಮಸ್ಸಿನ, ಸುಂದರ ಜೀವನದ ಬಗ್ಗೆ ಹಲವಾರು ಕನಸಿನ ಬುತ್ತಿಗಳನ್ನು ಕಟ್ಟಿಕೊಂಡಿದ್ದ ಯುವಕರ ಬದುಕಿನಲ್ಲೂ ಕಾಣದ ವಿಧಿ ಹಾಗೊಂದು ದಾಳ ಉರುಳಿಸಿಯೇಬಿಟ್ಟಿತ್ತು.
ಒಬ್ಬಾತ ನಿಂಗಪ್ಪ ಹಲವಾಗಲಿ. ಇಳಿವಯಸ್ಸಿನ ಸಂಧ್ಯಾಕಾಲದಲ್ಲಿ ಮಕ್ಕಳು ಕಣ್ಣೆದುರಿಗೇ ಬೆಳೆಯುತ್ತಿರುವ ಕ್ಷಣಗಳನ್ನು ಕಣ್ಣೆದುರೇ ನೋಡಿ, ಬಡತನದಲ್ಲೂ ನೆಮ್ಮದಿ ಕಾಣುತ್ತಿದ್ದ ತಂದೆ-ತಾಯಿ. ಜೊತೆಗೆ ಅವಿವಾಹಿತ ಅಣ್ಣ.
ಇನ್ನೊಬ್ಬಾತ ಮಹೇಶ ವಕ್ರದ. ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಮಹೇಶನೇನೂ ಬಂಗಾರದ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಬೆಳೆದವನಲ್ಲ. ತಾಯಿಯೇ ಕೂಲಿ-ನಾಲಿ ಮಾಡಿ ಸಾಕಿದಳು, ಬೆಳೆಸಿ ಓದಿಸಿದಳು. ಈ ಕುಟುಂಬಕ್ಕೆ ಕಷ್ಟವೇ ಹಾಸಿಗೆ, ಬಡತನವೇ ಹೊದಿಕೆ. ಸ್ವಂತದ್ದೆನ್ನುವ ಅಂಗುಲ ಜಾಗವೂ ಇಲ್ಲ. ಛಲ ಬಿಡದೇ ಓದಿದ ಮತ್ತು ಯಶಸ್ಸಿನ ಬೆನ್ನತ್ತಿ ಓಡಿದ. ಪಿಯುಸಿಯಲ್ಲಿ ತಾಲೂಕಿಗೇ ಪ್ರಥಮ ಸ್ಥಾನ ಪಡೆದು ಪಾಸ್ ಆದ ಪ್ರತಿಭಾವಂತ.
ಮಹೇಶ್ ಇಂತಹ ಬಡತನದಲ್ಲಿಯೇ ಇಬ್ಬರು ತಂಗಿಯರ ಮದುವೆ ಮಾಡಿದ. ಕಣ್ತುಂಬ ಕನಸುಗಳನ್ನೇ ತುಂಬಿಕೊಂಡಿದ್ದ ಈತ ಶಿಕ್ಷಕನಾಗಬೇಕೆಂಬ ಕನಸು ಕಂಡು ಧಾರವಾಡದ ಡಯಟ್ ನಲ್ಲಿ ಡಿ.ಎಡ್ ಮುಗಿಸಿದ. ಮುಂದೆ ಕುಟುಂಬ ನಿರ್ವಹಣೆ ಕಷ್ಟವಾಯಿತು. 2014ರಲ್ಲಿ ಕೆ.ಎಸ್.ಆರ್.ಪಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕವಾದ. ನಂತರ 2016ರಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನವನ್ನೂ ಪಡೆದು ಆಯ್ಕೆಯಾದ.
ಸರಕಾರಿ ನೌಕರಿ ಸಿಗುವವರೆಗೂ ತನ್ನ ಹುಟ್ಟೂರಿನ ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದ ಮಹೇಶ ಮತ್ತು ಆತನ ತಾಯಿ ಪೊಲೀಸ್ ಇಲಾಖೆಯಲ್ಲಿ ನೇಮಕವಾದ ನಂತರ ಪೊಲೀಸ್ ಕ್ವಾರ್ಟರ್ಸ್ ನಲ್ಲೇ ವಾಸವಾಗಿದ್ದರು.
ಕರ್ತವ್ಯದಲ್ಲಿದ್ದಾಗ ಬಡ ಮಕ್ಕಳನ್ನು, ಕೂಲಿಕಾರರನ್ನು, ದಿನದ 14 ಗಂಟೆ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಡವರನ್ನು ನೋಡಿ ಮರುಗುತ್ತಿದ್ದ. ಅವನಿಗೇ ಅರಿವಿಲ್ಲದಂತೆ ಕಣ್ಣಾಲಿ ತುಂಬಿಹೋಗುತ್ತಿತ್ತು. ಮಹೇಶನಿಗೆ ಜನಸೇವೆ ಮಾಡಬೇಕೆಂಬ ಅಪಾರ ತುಡಿತವಿತ್ತು.
ಹಗಲು ರಾತ್ರಿಯೆನ್ನದೇ ಪಿಎಸ್ಐ ಹುದ್ದೆ ಪಡೆಯಲೇಬೇಕೆಂಬ ಛಲದಿಂದ ಓದು ಮುಂದುವರೆಸಿದ್ದ. ಆದರೆ ವಿಧಿ? ಈತನ ಪಿ.ಎಸ್.ಐ ಕನಸು ಇಷ್ಟವಾಗಲಿಲ್ಲವೇನೋ. ನಿಂಗಪ್ಪನ ಬಡತನದ ನೋವು ಇಲ್ಲಿಗೇ ಸಾಕೆಂದು ಎಣಿಸಿತೇನೋ. ಕರ್ತವ್ಯ ಮುಗಿಸಿ ಮುಂಡರಗಿಗೆ ವಾಪಸ್ಸಾಗುತ್ತಿದ್ದ ಈ ಇಬ್ಬರೂ ಸ್ನೇಹಿತರು ಸಾವಿನಲ್ಲೂ ಜೊತೆಯಾದರು.
ಕಣ್ಣ ತುಂಬ ಕನಸು ಹೊತ್ತು ಗುರಿಯೆಡೆಗೆ ಸಾಗುತ್ತಿದ್ದ ಇಬ್ಬರ ಜೀವವೂ ಸೋತು ವಿಧಿಯಾಟದ ಕೈ ಮೇಲಾಯಿತು. ಇನ್ನೂ ಕ್ರಮಿಸಬೇಕಿದ್ದ ದೂರ ಅಲ್ಲಿಗೇ ಮುಗಿದುಹೋಗಿತ್ತು. ಹೇಗಾದರೂ ಸರಿ, ಉಸಿರಿನೊಂದಿಗೆ ಹಿಂದಿರುಗಿ ಬರಲಿ ಎಂಬ ಕುಟುಂಬಸ್ಥರ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.
ನಿಂಗಪ್ಪನ ಕುಟುಂಬದ ಗಟ್ಟಿ ಆಧಾರಸ್ಥಂಭ ಸರಿದುಹೋಗಿದೆ. ಮಗ ಮಹೇಶನನ್ನು ಕಳೆದುಕೊಂಡ ತಾಯಿಗೆ ಸ್ವಂತ ಸೂರಿಲ್ಲ. ಪೊಲೀಸ್ ಕ್ವಾಟರ್ಸ್ ನ್ನೇ ಆಶ್ರಯಿಸಿದ್ದ ಕುಟುಂಬ ಈಗ ಅಕ್ಷರಶಃ ಬೀದಿಗೆ ಬಂದು ನಿಂತಿದೆ. ಬದುಕಿನ ಊರುಗೋಲಾಗಿದ್ದ, ಎದೆಯೆತ್ತರ ಬೆಳೆದುನಿಂತ ಗುಂಡುಕಲ್ಲಿನಂತಿದ್ದ ಈ ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಮುಂದಿನ ದಿಕ್ಕೇನು?
ಈಗಲಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ, ಈ ಎರಡೂ ಕುಟುಂಬಗಳಿಗೆ ಸಾಂತ್ವನದ ಜೊತೆಗೆ ಸೂಕ್ತ ವ್ಯವಸ್ಥೆ, ಜೀವನ ನಿರ್ವಹಣೆಗೊಂದು ಮಾರ್ಗ ಒದಗಿಸಿಕೊಡಲಿ, ಮಕ್ಕಳ ಅಗಲಿಕೆಯ ನೋವಿಗೆ ಸೂಕ್ತ ಸ್ಪಂದನೆ ನೀಡಲಿ ಎಂಬುದು ನಮ್ಮ ಆಶಯ.