- ಮಹಾರಾಷ್ಟ್ರದ ಲಾಂಛನ, ಘೋಷಣೆಯಿರುವ ಟಿಕೆಟ್ ವಿತರಣೆಗೆ ಕನ್ನಡ ಸಂಘಟನೆಗಳ ಆಕ್ರೋಶ/ ಪ್ರತಿಭಟನೆ
ವಿಜಯಸಾಕ್ಷಿ ಸುದ್ದಿ, ಗದಗ
ಕರ್ನಾಟಕದಲ್ಲಿ ಕನ್ನಡ, ಕನ್ನಡಿಗನೇ ಸಾರ್ವಭೌಮ. ಇಲ್ಲಿ ಕನ್ನಡದ ಹೊರತಾಗಿ ಬೇರಾವ ಭಾಷೆಯೂ ಆಡಳಿತ ಭಾಷೆಯಾಗಬಾರದು. ಅನ್ಯ ಭಾಷೆಯ ಹಾವಳಿಯಿಂದ ಕನ್ನಡ ಭಾಷೆ ಮೂಲೆಗುಂಪಾಗುತ್ತಿದೆ, ಕನ್ನಡದ ಹೊಳಪು ಕಡಿಮೆಯಾಗುತ್ತಿದೆ ಎಂದು ಒಂದೆಡೆ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇತ್ತೀಚೆಗಷ್ಟೇ ನ್ಯಾಯಾಲಯ ಕೂಡ ಕನ್ನಡ ಭಾಷೆಯ ಪರವಾಗಿ ಮಹತ್ವದ ತೀರ್ಪು ನೀಡಿದ್ದು ಕನ್ನಡಾಭಿಮಾನಿಗಳ ಮೊಗದಲ್ಲಿ ನಗುವರಳಿಸಿತ್ತು.
ಈ ನಡುವೆಯೇ, ಕರ್ನಾಟಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ `ಮಹಾ’ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಕನ್ನಡಪರ ಹೋರಾಟಗಾರರ, ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕರ್ನಾಟಕದಲ್ಲೇ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ ನೀಡಲಾಗಿದ್ದ ಟಿಕೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರದ ಲಾಂಛನ, ಘೋಷಣೆಗಳು ಕಂಡು ಬಂದಿರುವುದು ಕನ್ನಡಪರ ಸಂಘಟನೆಗಳ ಕೋಪಕ್ಕೆ ಗ್ರಾಸವಾಗಿ, ಪ್ರತಿಭಟನೆಯವರೆಗೂ ತಲುಪಿರುವ ಘಟನೆ ಬುಧವಾರ ಗದಗನಲ್ಲಿ ನಡೆದಿದೆ.

ನಾಡಹಬ್ಬದ ಸಮಯದಲ್ಲಿಯೇ ಸಾರಿಗೆ ಸಂಸ್ಥೆಯ ಯಡವಟ್ಟಿನಿಂದ ಸರ್ಕಾರ ಮತ್ತೊಂದು ಗೊಂದಲಕ್ಕೆ ಗುರಿಯಾಗಿದೆ.
ಗದಗದಿಂದ ಗ್ರಾಮೀಣ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ನಲ್ಲಿ ಮಹಾರಾಷ್ಟ್ರದ ಲಾಂಛನವಿರುವ ಟಿಕೆಟ್ ವಿತರಣೆಯಾಗಿದ್ದು, `ಮಹಾರಾಷ್ಟ್ರ ನ್ ಪರಿವಾರನ್, ಜೈ ಮಹಾರಾಷ್ಟ’ ಘೋಷಣೆಗಳೂ ಮುದ್ರಿತವಾಗಿದ್ದವು. ಗದಗ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಾರಾಷ್ಟ್ರ ಪರವಾದ ಘೋಷಣೆಗಳಿರುವ ಟಿಕೆಟ್ ಹಂಚಿಕೆಯಾಗುತ್ತಿರುವುದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.
ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ನಾಡದ್ರೋಹಿ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು. ಕನ್ನಡ ಭಾಷೆಗೆ ದ್ರೋಹವೆಸಗುತ್ತಿರುವ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸಮಜಾಯಿಷಿ ನಿಡಿದ ಕೆಎಸ್‌ಆರ್‌ಟಿಸಿ ಡಿಸಿ ಜಿ. ಶೇನಯ್ಯಾ, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಟಿಕೆಟ್ ಮುದ್ರಿಸುವ ರೋಲ್‌ಗಳು ವಿಶಾಖಪಟ್ಟಣದಿಂದ ಸರಬರಾಜಾಗುತ್ತವೆ.
ಈ ಸಂದರ್ಭದಲ್ಲಿ ರೋಲ್ ವಿತರಿಸುವವರು ಪ್ರಮಾದವೆಸಗಿದ್ದು, ಮಹಾರಾಷ್ಟ್ರಕ್ಕೆ ಸರಬರಾಜಾಗಬೇಕಿದ್ದ ಮಹಾರಾಷ್ಟ್ರ ಲಾಂಛನವಿರುವ ಒಂದು ಬಾಕ್ಸ್ ಮಾತ್ರ ಗದಗಕ್ಕೆ ವಿತರಣೆಯಾಗಿತ್ತು.
ಗದಗ ಡಿಪೋದಲ್ಲಿ ಕ್ಲರ್ಕ್ ಗಳು ಸರಿಯಾಗಿ ಪರಿಶೀಲಿಸಿ ರೋಲ್‌ಗಳನ್ನು ಕೊಡಬೇಕಿತ್ತು. ಆದರೆ, ಅವರು ಈಬಗ್ಗೆ ಪರಾಮರ್ಶಿಸದೇ ಹಾಗೆಯೇ ಕಂಡಕ್ಟರ್‌ಗಳಿಗೆ ಕೊಟ್ಟಿದ್ದಾರೆ. ಈ ವಿಷಯದಲ್ಲಿ ಟಿಕೆಟ್ ರೋಲ್‌ಗಳನ್ನು ಸರಬರಾಜು ಮಾಡಿದ ವ್ಯಕ್ತಿ, ಕ್ಲರ್ಕ್ ಗಳು ಹಾಗೂ ಕಂಡಕ್ಟರ್‌ಗಳೂ ತಪ್ಪು ಮಾಡಿದ್ದಾರೆ.
ಒಂದು ಬಾಕ್ಸ್ ನಲ್ಲಿ ೨೦೦ ರೋಲ್‌ಗಳು ಬಂದಿರುತ್ತವೆ. ಅವುಗಳಲ್ಲಿ ೭೦ ರೋಲ್‌ಗಳನ್ನು ಕಂಡಕ್ಟರ್‌ಗಳಿಗೆ ನೀಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಕಂಡಕ್ಟರ್ ಕಡೆಯಿಂದ ಟಿಕೆಟ್ ರೋಲ್‌ಗಳನ್ನು ಹಿಂದಕ್ಕೆ ಪಡೆಯಲಾಗಿದೆ. ತಪ್ಪು ಮಾಡಿದ ಕ್ಲರ್ಕ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಅವಮಾನವಾಗುವಂಥ ಘಟನೆ ಗದಗದಲ್ಲಿ ನಡೆದಿದೆ. ಮರಾಠಿ ಭಾಷೆಯಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಮುದ್ರಣವಾಗಿರುವ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು, ನಿರ್ವಾಹಕರು ಕಣ್ಮುಚ್ಚಿಕೊಂಡೇ ಟಿಕೆಟ್ ನೀಡಿದರಾ? ಕನ್ನಡಿಗರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಈ ಟಿಕೆಟ್ ರೋಲ್‌ಗಳು ಗದಗ ತಲುಪಿದವಾ? ಯಾವ ಕಾರಣಕ್ಕಾಗಿ ಇಲ್ಲಿಗೆ ತಲುಪಿ ವಿತರಣೆಯಾದವು? ಟಿಕೆಟ್ ರೋಲ್ ಖರೀದಿ ಮಾಡಲು ಸರ್ಕಾರ, ಸಾರಿಗೆ ಸಂಸ್ಥೆಯ ಬಳಿ ಹಣವಿಲ್ಲವೆಂದರೆ ಹೇಳಿ. ಕನ್ನಡಿಗರು ವಿಶಾಲ ಹೃದಯದವರಿದ್ದೇವೆ. ನಾವೇ ವಂತಿಗೆ ಸಂಗ್ರಹಿಸಿ ಸರ್ಕಾರಕ್ಕೆ ನೀಡುತ್ತೇವೆ. ಆ ಹಣದಲ್ಲಿಯೇ `ಜೈ ಕರ್ನಾಟಕ’ ಎಂದು ಮುದ್ರಿಸಿರುವ ಟಿಕೆಟ್ ಹಂಚಿ. ಮುಖ್ಯಮಂತ್ರಿಗಳು, ಸಾರಿಗೆ ಸಚಿವರೆಲ್ಲ ಎಲ್ಲಿದ್ದೀರಿ? ತಕ್ಷಣ ಇಂಥ ಅಪರಾಧವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ. ಇಲ್ಲವಾದರೆ ರಾಜೀನಾಮೆ ನೀಡಿ ಹೊರಬನ್ನಿ
ಚಂದ್ರಕಾಂತ ಚವ್ಹಾಣ. ಜಯ ಕರ್ನಾಟಕ ಸಂಘಟನೆ ಮುಖಂಡ
ಇವತ್ತು ನಾಡಹಬ್ಬ ದಸರಾ. ಈ ಸಂದರ್ಭದಲ್ಲಿ ಗದಗ ಸಾರಿಗೆ ಡಿಪೋದಿಂದ ಸಂಚರಿಸುವ ಬಸ್‌ಗಳಲ್ಲಿ `ಜೈ ಮಹಾರಾಷ್ಟ್ರ ಎಂಬ ಘೋಷಣೆ, ಮಹಾರಾಷ್ಟ್ರದ ಲಾಂಛನವಿರುವ ಟಿಕೆಟ್‌ಗಳನ್ನು ನೀಡಿ ಸಮಸ್ತ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಈ ಘಟನೆಯನ್ನು ಎಲ್ಲ ಕನ್ನಡಪರ ಸಂಘಟನೆಗಳು ಖಂಡಿಸುತ್ತವೆ. ಸಾರಿಗೆ ಇಲಾಖೆಯ ಅಧಿಕಾರಿಗಳ ಈ ಕನ್ನಡ ದ್ರೋಹವನ್ನು ಗಮನಿಸಿ ಅಂಥಹ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತು ಮಾಡಬೇಕು. ನಾಳೆ ಬೆಳಿಗ್ಗೆಯೊಳಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬಸ್ ನಿಲ್ದಾಣದದ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಕನ್ನಡಕ್ಕಾಗಿ ನಾವು ಕನ್ನಡಿಗರು, ಸಂಘಟನೆಗಳು ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ.
ಭಾಷಾಸಾಬ್ ಮಲ್ಲಸಮುದ್ರ. ಕನ್ನಡಪರ ಸಂಘಟನೆ ಮುಖಂಡ