ವಿಜಯಸಾಕ್ಷಿ ಸುದ್ದಿ, ಗದಗ
ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸರ್ಕಾರ ಸೂಕ್ತಾವಾದ ಮಧ್ಯಂತರ ಪರಿಹಾರ ನೀಡಲು ಮುಂದಾಗಿದೆ. ಆದ್ರೆ ಕೆಲವು ಸಿಬ್ಬಂದಿಗಳು ಮಾಡುವ ಎಡವಟ್ಟಿನಿಂದ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ದೇವರ ವರ ಕೊಟ್ರು ಪೂಜಾರಿ ವರ ಕೊಡಲ್ಲ ಅನ್ನೋ ಗಾದೆ ಮಾತಿನಂತೆ ಇಂಥಹದ್ದೊಂದು ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಬೆಳೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಕೆಲ ರೈತರು ಗ್ರಾಮ ಲೆಕ್ಕಾಧಿಕಾರಿಯನ್ನು ಕೂಡಿ ಹಾಕಿದ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ.
ಸುಮಾರು ಏಳು ಗಂಟೆಗಳ ಕಾಲ ರೈತರು ಗ್ರಾಮ ಲೆಕ್ಕಾಧಿಕಾರಿಯನ್ನ ಕೂಡಿ ಹಾಕಿದ್ದರು. ಗ್ರಾಮಲೆಕ್ಕಾಧಿಕಾರಿ ಬೇಕಾದವರಿಗೆ ಮಾತ್ರ ಪರಿಹಾರದ ಹಣ ಜಮೆ ಮಾಡಿಸಿದ್ದಾನೆಂದು ಆರೋಪಿಸಿರುವ ರೈತರು ತಲಾಟಿಯನ್ನ ತರಾಟೆಗೆ ತೆಗೆದುಕೊಂಡು ಕೂಡಿಹಾಕಿದ್ದರು.
ಲೆಕ್ಕಾಧಿಕಾರಿ ವೀರನಗೌಡ ದಾನಪ್ಪಗೌಡರ ಎಂಬ ಗ್ರಾಮ ಲೆಕ್ಕಾಧಿಕಾರಿ, ಹೊಂಬಳ ಗ್ರಾಮದಲ್ಲಿ 3180 ರೈತ ಖಾತೆಗಳಿವೆ. ಆ ಪೈಕಿ 800 ಖಾತೆಗಳಿಗೆ ಮಾತ್ರ ಪರಿಹಾರದ ಹಣ ಸಂದಾಯವಾಗಿದೆ. ಇನ್ನುಳಿದ ರೈತರಿಗೆ ಹಣ ಸಂದಾಯವಾಗಿಲ್ಲ. ಹೀಗಾಗಿ ರೊಚ್ಚಿಗೆದ್ದ ರೈತರು ತಲಾಟಿಯನ್ನು ಕೂಡಿಹಾಕಿದ್ದರು.
ರೈತರು ತಹಸೀಲ್ದಾರ್ ಅಥವಾ ಡಿಸಿ ಅವರು ಬರಬೇಕು ಅಂತಾ ಪಟ್ಟು ಹಿಡಿದಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ ಹರಿಹರ ಹಾಗೂ ತಹಸೀಲ್ದಾರ್ ಕಿಶನ್ ಕಲಾಲ, ಅರ್ಹ ರೈತರಿಗೆ ಪರಿಹಾರದ ಹಣ ತಲುಪಿಸುವ ಭರವಸೆ ನೀಡಿ ಗ್ರಾಮ ಲೆಕ್ಕಾಧಿಕಾರಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.