ಎಪಿಎಂಸಿ ಆವರಣದಲ್ಲಿ ರಟ್ಟಿನ ಡಬ್ಬದಲ್ಲಿ ಪತ್ತೆಯಾದ ಹಸುಳೆ; ಛೇ! ಇವರೆಂಥಾ ಕಟುಕರು…

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಈಗಿನ್ನೂ ಕಣ್ಣು ಬಿಡದ ಹಸುಗೂಸು ತಾಯಿಯ ಬೆಚ್ಚನೆಯ ಮಡಿಲಲ್ಲಿ ಆರೈಕೆಗೊಳ್ಳದೇ ರಟ್ಟಿನ ಡಬ್ಬಿಯಲ್ಲಿ ಆಕ್ರಂದಿಸುತ್ತಿತ್ತು. ಮೂರೇ ದಿನಗಳ ಹಿಂದೆ ಮಾತೃಗರ್ಭದಿಂದ ಹೊರಬಂದು ಯಾಕಾದರೂ ಈ ಹಾಳು ಕಟುಕರ ಪ್ರಪಂಚಕ್ಕೆ ಕಾಲಿಟ್ಟೆನೋ ಎಂಬ ಭಾವದಲ್ಲಿ ಒಂದೇ ಸಮನೆ ಆಕ್ರಂದಿಸುತ್ತಿತ್ತು. ಸಾರ್ವಜನಿಕರ ಹಾಗೂ ಪೊಲೀಸ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಬೀದಿ ನಾಯಿ/ಹಂದಿಗಳ ಪಾಲಾಗಲಿದ್ದ ಹಸುಗೂಸು ಜೀವವುಳಿಸಿಕೊಂಡಿದೆ.

ಇಂಥದೊಂದು ಅಮಾನವೀಯ ದಾರುಣ ಘಟನೆ ನಡೆದಿದ್ದು ನಮ್ಮದೇ ಗದಗ ನಗರದಲ್ಲಿ. ಮನುಷ್ಯತ್ವ ಮರೆತ ಪಾಲಕರು ಹಸುಗೂಸಿನ ಪಾಲನೆ ಮಾಡದೇ ರಟ್ಟಿನ ಡಬ್ಬಿಯೊಂದರಲ್ಲಿಟ್ಟು, ನಗರದ ಎಪಿಎಂಸಿ ಆವರಣದ ಜನನಿಬಿಡ ಸ್ಥಳವೊಂದರಲ್ಲಿ ಬೇವಿನ ತಪ್ಪಲುಗಳ ಸಂದಿನಲ್ಲಿ ಪೆಟ್ಟಿಗೆಯನ್ನಿಟ್ಟು ವಿದಾಯ ಹೇಳಿದ್ದರು. ಆಕಾಶ್ ಎಂಬ ಯುವಕನೊಬ್ಬ ಚಿಕ್ಕ ಮಗು ಅಳುತ್ತಿರುವ ಶಬ್ಧ ಕೇಳಿ ಅತ್ತಿತ್ತ ಹುಡುಕಾಡಿದಾಗ ರಟ್ಟಿನ ಡಬ್ಬದಲ್ಲಿದ್ದ ಈ ಮಗು ಕಾಣಿಸಿತ್ತು. ತಕ್ಷಣ ಎಚ್ಚೆತ್ತ ಆಕಾಶ್ ಬಡಾವಣೆಯ ಪೊಲೀಸ್ ಸಿಬ್ಬಂದಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿಗಳಾದ ಪರಶುರಾಮ ದೊಡ್ಡಮನಿ ಹಾಗೂ ಅಶೋಕ್ ಸ್ಥಳಕ್ಕಾಗಮಿಸಿ ಶಿಶುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ಮನುಷ್ಯರ ಸ್ಪರ್ಶ/ಸಂಪರ್ಕವಾಗುತ್ತಿದ್ದಂತೆಯೇ ಮಗುವಿನ ಆಕ್ರಂಧನ ಮುಗಿಲುಮುಟ್ಟುವಂತಿದ್ದು, ದೃಶ್ಯ ಎಂಥ ಕಲ್ಲು ಹೃದಯದವರಿಗೂ ಕರುಳು ಹಿಂಡುವಂತಿತ್ತು. ಇದೀಗ ಶಿಶುವಿನ ಪೋಷಕರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಯುವಕ ಆಕಾಶ್ ಹಾಗೂ ಪೊಲೀಸ್ ಸಿಬ್ಬಂದಿಗಳ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಸುಳೆಯನ್ನು ಹೀಗೆ ಅಮಾನವೀಯವಾಗಿ ಡಬ್ಬದಲ್ಲಿ ತುಂಬಿ ಅನಾಥವಾಗಿಸಿ ಬಿಟ್ಟುಹೋದ ಪಾಪಿ ಪಾಲಕರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here