ಸೋಮನಕಟ್ಟಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಗ್ರಾಮಸ್ಥರು
ವಿಜಯಸಾಕ್ಷಿ ಸುದ್ದಿ, ರೋಣ
ತಾಲೂಕಿನ ಹುಲ್ಲೂರ ಗ್ರಾಪಂಗೆ ಒಳಪಡುವ ಸೋಮನಕಟ್ಟಿ ಗ್ರಾಮಕ್ಕೆ ಕಳೆದ ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗದಿರುವುದನ್ನು ಖಂಡಿಸಿ ಗ್ರಾಮಸ್ಥರು ಗುರುವಾರ ಗ್ರಾಪಂಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆಯನ್ನು ನಡೆಸಿದರು.
ಗ್ರಾಮಕ್ಕೆ ಒಂದು ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲದೆ ದನ ಕರುಗಳನ್ನು ಬಿಡುವ ನೀರಿನ ಕೆರೆಯಿಂದ ಕುಡಿಯಲು ನೀರು ತರುವ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಈ ವಿಷಯವನ್ನು ಗ್ರಾಪಂನವರಿಗೆ ತಿಳಿಸಿದರೂ ಸಹ ಸಮಸ್ಯೆ ಬಗೆಹರಿಸುತ್ತಿಲ್ಲ. ಹೀಗಾದರೆ ಗ್ರಾಮದಲ್ಲಿನ ನಾಗರಿಕರನ್ನು ಕಾಪಾಡುವರ‍್ಯಾರು ಎಂದು ಪ್ರಶ್ನಿಸುವ ಮೂಲಕ ಗ್ರಾಪಂ ಆಡಳಿತ ವ್ಯವಸ್ಥೆ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರ ಜೊತೆಗೆ ಸದಸ್ಯರು ಚರ್ಚಿಸಲು ಬರುತ್ತಿದ್ದಂತೆ ಮೊದಲು ಕುಡಿಯಲು ನೀರು ಕೊಡಿ, ಆಮೇಲೆ ನಮ್ಮ ಜೊತೆ ಚರ್ಚೆಗೆ ಬನ್ನಿ ಎಂದು ಪಟ್ಟು ಹಿಡಿಯುವ ಜೊತೆಗೆ ಸೋಮನಕಟ್ಟಿ ಗ್ರಾಮದ ಸದಸ್ಯರು ಸಹ ಸ್ಥಳಕ್ಕೆ ಬರಬೇಕು ಎಂದು ಆಗ್ರಹ ಮಾಡಿದರು. ಆಗ ಉಪಾಧ್ಯಕ್ಷ ಬಸವರಾಜ ಬ್ಯಾಳಿಯವರು ದೂರವಾಣಿ ಮೂಲಕ ಗ್ರಾಮದ ಗ್ರಾಪಂ ಸದಸ್ಯರನ್ನು ಸಂಪರ್ಕಿಸಿ ಪ್ರತಿಭಟನಾ ನಿರತ ಸ್ಥಳಕ್ಕೆ ಬರುವಂತೆ ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ನಂದಾ ಬರಡ್ಡಿಯವರ ಸಂಧಾನ ಸಹ ವಿಫಲಗೊಂಡಿತು. ನಂತರ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸಭೆ ನಡೆಸುವ ಮೂಲಕ ಪ್ರತಿಭಟನಾ ನಿರತರ ಮನವೊಲಿಕೆಗೆ ನಿರ್ಧಾರ ಮಾಡಿದ ಘಟನೆ ಸಹ ನಡೆಯಿತು.
ಸಭೆಯ ನಂತರ ಉಪಾಧ್ಯಕ್ಷ ಬಸವರಾಜ ಬ್ಯಾಳಿ, ಸದಸ್ಯ ಅಶೋಕ ಗಟ್ಟಿ ಹಾಗೂ ಸೋಮನಕಟ್ಟಿ ಗ್ರಾಮದ ಸದಸ್ಯರು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ೨೪ ಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸಿ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಒಪ್ಪಿದ ಪ್ರತಿಭಟನಾ ನಿರತರು ನಿಮ್ಮ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನೆಯನ್ನು ವಾಪಸ್ಸು ಪಡೆಯುತ್ತಿದ್ದು, ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ, ತಪ್ಪಿದರೆ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದರು.
ಸುನಂದ ಬಡಿಗೇರ, ಸುಜಾತ ಶೆಟ್ಟರ, ಶರಣವ್ವ ಭಜಂತ್ರಿ, ರಾಜವ್ವ ಕೌಜಗೇರಿ, ಹನಮವ್ವ ಕುರಿ, ಬಸವ್ವ ಮೆಣಸಗಿ, ಚಂದ್ರಿಕಾ ಮಡ್ಡಿ ಸೇರಿದಂತೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಗ್ರಾಪಂ ಸದಸ್ಯರುಗಳಿದ್ದಾರೆ. ಆದರೆ ಸದಸ್ಯರ ಸಮಸ್ಯೆಗಳನ್ನು ಆಲಿಸಲು ಗ್ರಾಪಂನಲ್ಲಿ ಯಾವ ಅಧಿಕಾರಿಗಳಿದ್ದಾರೆ? ಪಿಡಿಒ ಇಲ್ಲ, ಇದ್ದ ಕಾರ್ಯದರ್ಶಿಯನ್ನು ತಾಪಂ ಇಒರವರು ತಮ್ಮ ಕಚೇರಿಗೆ ತೆಗೆದುಕೊಂಡಿದ್ದು, ನಾವು ಯಾರ ಬಳಿ ಸಮಸ್ಯೆಗಳ ನಿವಾರಣೆಗೆ ಮನವಿ ಮಾಡೋಣ? ಒಂದು ರೀತಿಯಲ್ಲಿ ಗ್ರಾಪಂ ಎನ್ನುವುದು ಕೊಂಗವಾಡದಂತೆ ಆಗಿಬಿಟ್ಟಿದೆ ಎಂದು ಸದಸ್ಯರು ಮಾಧ್ಯಮದವರ ಮುಂದೆ ಅಳಲು ತೊಡಿಕೊಂಡರು.