ಬಂಡಾಯದ ನೆಲ ನವಲಗುಂದ..ನರಗುಂದ ಕ್ಷೇತ್ರ ಗೆಲ್ಲಲೇಬೇಕು ಅನ್ನೊ ಹಠಕ್ಕೆ ಬಿದ್ದಿರೋ ಕಾಂಗ್ರೆಸ್
ವಿಜಯಸಾಕ್ಷಿ ಸುದ್ದಿ, ನವಲಗುಂದ
ಇನ್ನೇನು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಟಿಕೆಟ್‍ಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆಗೆ ಭಾರಿ ರಣತಂತ್ರ ರೂಪಿಸುತ್ತಿರುವುದರಿಂದ ಟಿಕೆಟ್ ಆಕಾಂಕ್ಷಿಗಳ ಹೃದಯಬಡಿತ ಹೆಚ್ಚಾಗುತ್ತಿದೆ.
ನವಲಗುಂದ-ನರಗುಂದ ಎಂದರೆ ಅದು ರೈತ ಬಂಡಾಯದ ನಾಡು ಎಂಬುದು ಈಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಇದೇ ಬಂಡಾಯದ ನೆಲದ ರೈತರು ರೊಚ್ಚಿಗೆದ್ದಾಗ 1981 ರಲ್ಲಿ ಮುಖ್ಯಮಂತ್ರಿ ಗುಂಡುರಾಯರ ನೇತ್ರತ್ವದ ಕಾಂಗ್ರೆಸ್ ಸರ್ಕಾರವನ್ನೇ ಕಿತ್ತೊಗೆದು ಕಾಂಗ್ರೆಸ್ಸೇತರ ಸರ್ಕಾರವನ್ನು ಆಡಳಿತಕ್ಕೆ ತಂದಂತಹ ಕೆಚ್ಚೆದೆಯ ನಾಡು ಇದಾಗಿದೆ.
ಆದರೆ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಸತತ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಈ ವಿಷಯವನ್ನು ಅರಿತುಕೊಂಡಿರುವ ಹೈಕಮಾಂಡ್ ಹೇಗಾದರೂ ಮಾಡಿ ರೈತ ಬಂಡಾಯದ ನಾಡಾಗಿರುವ ನವಲಗುಂದ ಹಾಗೂ ನರಗುಂದ ಎರಡೂ ವಿಧಾನಸಭಾ ಕ್ಷೇತ್ರಗಳನ್ನು ಹೇಗಾದರೂ ಮಾಡಿ ಈ ಭಾರಿ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದಂತೆ ಕಾಣುತ್ತಿದ್ದು ಟಿಕೆಟ್ ಹಂಚಿಕೆಗೆ ಭಾರಿ ರಣತಂತ್ರ ರೂಪಿಸುತ್ತಿರುವುದು ಕಂಡುಬಂದಿದೆ.
ನವಲಗುಂದ ಕ್ಷೇತ್ರದಲ್ಲಿ ಸಂಘಟನೆಯ ಬಗ್ಗೆ ಈಗಾಗಲೇ ಎರಡು ಭಾರಿ ಸಮೀಕ್ಷೆ ಕೈಗೊಳ್ಳಲಾಗಿದ್ದು ಗುಪ್ತ ಸಮೀಕ್ಷಾ ವರದಿಯನ್ನು ಹೈಕಮಾಂಡ್ ಪಡೆದುಕೊಂಡಿದೆ. ಕಾಂಗ್ರೆಸ್ ಚುನಾವಣಾ ಸಮಿತಿ ಅರ್ಜಿ ಹಾಕಿರುವ ಆಕಾಂಕ್ಷಿಗಳ ಜೊತೆ ನಿರಂತರ ಸಂಪರ್ಕ ಹೊಂದಿ ಮಾಹಿತಿ ಪಡೆದುಕೊಳ್ಳುತ್ತಿದ್ದು ಟಿಕೆಟ್ ಆಕಾಂಕ್ಷಿಗಳು ಪ್ರತ್ಯೇಕವಾಗಿ ಸಭೆ, ಪ್ರಚಾರ ಮಾಡದಂತೆ ಈಗಾಗಲೇ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆಂಬುದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಎನ್.ಗಡ್ಡಿಯವರಿಗೆ ಕೊನೆಗಳಿಗೆಯಲ್ಲಿ ಟಿಕೆಟ್ ಕೈತಪ್ಪಿ ಯುವ ಮುಖಂಡನಾಗಿದ್ದ ವಿನೋದ ಅಸೂಟಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಾದರೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಆದರೆ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷದ ಎನ್.ಎಚ್.ಕೋನರಡ್ಡಿ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಟಿಕೆಟ್ ಯಾರಿಗೆ ಕೊಡಬೇಕೆಂಬುದು ಹೈಕಮಾಂಡ್‍ಗೆ ತಲೆಬಿಸಿ ಮಾಡಿದೆ.
ಪಕ್ಷದಲ್ಲಿ ಹಿರಿಯರಾಗಿರುವ ಕೆ.ಎನ್.ಗಡ್ಡಿಯವರು 1994, 1999 ಅವಧಿಯಲ್ಲಿ ಎರಡು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನಂತರದ 2004, 2008 ಹಾಗೂ 2013 ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದರಾದರೂ ಹ್ಯಾಟ್ರಿಕ್ ಸೋಲು ಅನುಭವಿಸಿದ ಕಾರಣ 2018ರ ಚುನಾವಣೆಯಲ್ಲಿ ಯುವ ಮುಖಂಡ ವಿನೋದ ಅಸೂಟಿಯವರಿಗೆ ಟಿಕೆಟ್ ನೀಡಲಾಗಿತ್ತಾದರೂ ಅವರು ಕೂಡ ಸೋಲು ಅನುಭವಿಸಿದರು.

ವಿಶೇಷವೆಂದರೆ ನಾಲ್ಕು ಚುನಾವಣೆಯಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳಿಗೆ ಮಣಿ ಹಾಕಿದ್ದರೂ ಗೆಲುವಿನ ದಡ ಸೇರುವಲ್ಲಿ ವಿಫಲರಾದ ಕಾರಣದಿಂದಲೇ ಜೆಡಿಎಸ್ ಪಕ್ಷದಲ್ಲಿದ್ದ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಟಿಕೆಟ್ ನನಗೇ ಕೊಟ್ಟರೆ ಭಾರಿ ಬಹುಮತದಿಂದ ಗೆಲ್ಲುತ್ತೇನೆಂದು ಹೈಕಮಾಂಡ್ ಮುಂದೆ ತಮ್ಮ ಅಹವಾಲು ಇಟ್ಟಿದ್ದಾರೆ.
ಪ್ರತ್ಯೇಕ ಸಭೆ, ಪ್ರಚಾರ ಮಾಡದಂತೆ ಆಕಾಂಕ್ಷಿಗಳಿಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೇ ನೀಡಿದ್ದರೂ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಯುವ ಮುಖಂಡ ವಿನೋದ ಅಸೂಟಿ ಮೂವರು ಆಕಾಂಕ್ಷಿಗಳು ಪ್ರತ್ಯೇಕವಾಗಿ ತಮ್ಮದೇ ಆದ ಗುಂಪುಗಳನ್ನು ಕಟ್ಟಿಕೊಂಡು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ ಮೂವರು ಆಕಾಂಕ್ಷಿಗಳು ಈಗಾಗಲೇ ಪ್ರತ್ಯೇಕವಾಗಿ ತಮ್ಮದೇ ಭಾವಚಿತ್ರ ಹೊಂದಿರುವ ಕ್ಯಾಲೆಂಡರ್‍ಗಳನ್ನು, ಕರಪತ್ರಗಳನ್ನು ಹೊರಡಿಸಿದರೇ, ಸಂಕ್ರಮಣದ ಸಂದರ್ಭದಲ್ಲಿ ‘ಕುಸರೆಳ್ಳಿನ’ ಪ್ಯಾಕೆಟ್‍ಗಳನ್ನು ಮನೆ ಮನೆಗೆ ತಲುಪಿಸಿ ನಮಗೇ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಲ್ಲಿ ಮೊದಲ ಸುತ್ತಿನ ಪ್ರಚಾರ ಮುಗಿಸಿದ್ದಾರೆ.
ಒಂದು ಹೆಜ್ಜೆ ಮುಂದಿಟ್ಟಿರುವ ಎನ್.ಎಚ್.ಕೋನರಡ್ಡಿಯವರು ಪ್ರತಿ ಗ್ರಾಮಗಳಲ್ಲಿಯೂ ತಾವು ಮಾಡಿರುವ ಸಾಧನೆಗಳು, ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಬಗ್ಗೆ ಮಾಡಿರುವ ಹೋರಾಟದಂತಹ ಪಟ್ಟಿಯ ದೊಡ್ಡ ದೊಡ್ಡ ಕಟೌಟ್‍ಗಳನ್ನು ಹಾಕಿಕೊಂಡು ಪ್ರಚಾರದಲ್ಲಿ ಮುಂಚೂಣಿ ಪಡೆದುಕೊಂಡಿದ್ದಾರೆ.

ಎನ್.ಎಚ್.ಕೋನರಡ್ಡಿ ಬೆಂಬಲಿಗರಂತೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮುಂಚೆಯೇ ಟಿಕೆಟ್ ಖಚಿತಪಡಿಸಿಕೊಂಡೇ ಬಂದಿದ್ದೇವೆಂದು ಹೇಳುತ್ತಿರುವುದು ಮೂಲ ಕಾಂಗ್ರೆಸ್ಸಿಗರ ತಲೆಬಿಸಿ ಮಾಡಿದ್ದಂತು ಸತ್ಯ.
ಗೆಲುವೊಂದೇ ಅಸ್ತ್ರ – ಏನಿದು ಕಾಂಗ್ರೆಸ್ ಪಕ್ಷದ ರಣತಂತ್ರ
ದುರ್ಬಲ ಅಭ್ಯರ್ಥಿ, ಸರ್ವೆಯಲ್ಲಿ ಸೋಲುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೆ ಟಿಕೆಟ್ ಕೊಡಬಾರದೆಂಬುದು ಸ್ಥಳಿಯ ನಾಯಕರ, ಕಾರ್ಯಕರ್ತರ ಒತ್ತಡವಾದರೆ, ಕುರುಬ ಸಮಾಜದವರು ನಮಗೇ ಟಿಕೆಟ್ ಕೊಟ್ಟರೇ ಮಾತ್ರ ಗೆಲುವು ಸಾಧ್ಯ ಇಲ್ಲದಿದ್ದರೇ ಸೋಲು ಖಚಿತ ಎಂಬ ಲೆಕ್ಕಾಚಾರ, ಇನ್ನು ಲಿಂಗಾಯತರಿಗೆ ಒಮ್ಮೆ ಕೊಟ್ಟು ನೋಡಿ ಎಂಬುದಾಗಿ ಹೈಕಮಾಂಡ್‍ಗೆ ಬಲವಾದ ಒತ್ತಡ ಹಾಕುತ್ತಿರುವುದು ಕಂಡುಬಂದಿದೆ. ವಲಸೆ ಬಂದಿರುವ ಎನ್.ಎಚ್.ಕೋನರಡ್ಡಿಯವರಿಗೆ ಹೈಕಮಾಂಡ್ ಯಾವ ವಚನ ನೀಡಿದೇ ಎಂಬುದು ಇನ್ನು ಬಹಿರಂಗಪಡಿಸಿಲ್ಲವಾದರೂ ಕಾರ್ಯಕರ್ತರಲ್ಲಿ ಚರ್ಚೆ ಮಾತ್ರ ಜೋರಾಗಿಯೇ ನಡೆಯುತ್ತಿದೆ. ವಲಸೆ ಬಂದಿರುವ ಕೋನರಡ್ಡಿಯವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವ ಮಾನದಂಡ ಯಾವುದು, ಒಂದುವೇಳೆ ಮೂಲ ಕಾಂಗ್ರೆಸ್ಸಿಗರು ಬಂಡಾಯವೆದ್ದರೇ ಕಾಂಗ್ರೆಸ್ ಪಕ್ಷ ಹೇಗೆ ಗೆಲ್ಲಲಿದೆ ಎಂಬ ತಲೆಬಿಸಿಯಂತೂ ಹೈಕಮಾಂಡ ಮುಂದಿದೆ. ಈಗಾಗಲೇ ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಎಲ್ಲರೂ ಹೊಂದಾಣಿಕೆ ಮಾಡಿಕೊಳ್ಳಬೇಕು, ಸ್ಥಳೀಯ ಮಟ್ಟದ ನಾಯಕರು, ಟಿಕೆಟ್ ಆಕಾಂಕ್ಷಿಗಳ ಮನವೊಲಿಕೆ ಮಾಡಿ ರಾಜೀ ಸೂತ್ರ ಸಿದ್ದಪಡಿಸುವುದು, ಅಂತಿಮವಾಗಿ ರೇಸ್‍ನಲ್ಲಿ ಯಾವ ಕುದುರೆ ಗೆಲ್ಲಲಿದೇ ಎಂಬ ಲೆಕ್ಕಾಚಾರ ಹಾಕಿಯೇ ಟಿಕೆಟ್ ಘೋಷಣೆ ಮಾಡುವಂತೆ ರಣತಂತ್ರ ರೂಪಿಸಲಾಗುತ್ತಿದ್ದು, ಕೊನೆಗೆ ಹೈಕಮಾಂಡ್ ಯಾವ ಹೆಜ್ಜೆ ಇಡಲಿದೆ ಎಂಬುದೇ ಕುತೂಹಲ ಮೂಡಿಸಿದ್ದು ಆಕಾಂಕ್ಷಿಗಳಲ್ಲಿ ಹೃದಯ ಬಡಿತ ಹೆಚ್ಚಾಗುವಂತೆ ಮಾಡಿದೆ.
ಒಟ್ಟಾರೆ ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಯುವ ಮುಖಂಡ ವಿನೋದ ಅಸೂಟಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು ಕೊನೆಗಳಿಗೆಯಲ್ಲಿ ಟಿಕೆಟ್ ಯಾರು ಗಿಟ್ಟಿಸಿಕೊಳ್ಳುತ್ತಾರೆಂಬುದೇ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಅರ್ಜಿ ಸಲ್ಲಿಸಿರುವ 8 ಆಕಾಂಕ್ಷಿಗಳು :
ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಯುವ ಮುಖಂಡ ವಿನೋದ ಅಸೂಟಿ, ಮಾಜಿ ಜಿ.ಪಂ.ಉಪಾಧ್ಯಕ್ಷ ಶಿವಾನಂದ ಕರಿಗಾರ, ರಾಜಶೇಖರ ಮೆಣಸಿನಕಾಯಿ, ಬಾಪುಗೌಡ ಪಾಟೀಲ, ವಿಜಯಲಕ್ಷ್ಮೀ ಪಾಟೀಲ ಹಾಗೂ ಚಂಬಣ್ಣ ಹಾಳದೋಟರ.