ನಕಲಿ ಅಪ್ಲಿಕೇಶನ್ ಬಳಸಿ ಮೋಸಹೋಗಬೇಡಿ`ಪಿಂಕ್ ವಾಟ್ಸಪ್’ ಬಗ್ಗೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ಜಾಗೃತಿ……..

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

Advertisement

ಪ್ರಸ್ತುತ ಅಂತರ್ಜಾಲ ಪ್ರಪಂಚದಲ್ಲಿ ತಾವು ಕುಳಿತ ಸ್ಥಳದಿಂದಲೇ ಎಲ್ಲ ಕೆಲಸಗಳನ್ನೂ ನಿಭಾಯಿಸುವ ಮಟ್ಟಕ್ಕೆ ಬಂದು ತಲುಪಿದ್ದು, ಸುಲಭವಾಗಿ ಅನಿಯಮಿತ ಡಾಟಾ ಸಿಗುವುದರಿಂದ ಬಹುತೇಕರು ಆನ್‌ಲೈನ್‌ನಲ್ಲೇ ಎಲ್ಲ ವ್ಯಾಪಾರ-ವಹಿವಾಟುಗಳನ್ನು ಮಾಡುತ್ತಿದ್ದಾರೆ.

ಇದು ಅನೇಕರಿಗೆ ವರವಾದರೆ, ಇನ್ನೂ ಕೆಲವರು ಅಕೌಂಟ್‌ಗಳನ್ನು ಹ್ಯಾಕ್ ಮಾಡಿ ಜನಸಾಮಾನ್ಯರಿಗೆ ವಂಚನೆ ಮಾಡುವುದನ್ನು ಸಹ ದಂಧೆಯನ್ನಾಗಿಸಿಕೊಂಡಿದ್ದಾರೆ.

ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಾಲಕಾಲಕ್ಕೆ ಜನಸಾಮಾನ್ಯರಿಗೆ ಅನೇಕ ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ `ಪಿಂಕ್ ವಾಟ್ಸಾಪ್’ ಬಗ್ಗೆಯೂ ಸಹ ಜನತೆ ಎಚ್ಚರಿಕೆ ವಹಿಸುವುದು ಅವಶ್ಯವಿದೆ.

ಏನಿದು ಪಿಂಕ್ ವಾಟ್ಸಾಪ್?

ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಬೇರೆ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವ ಸಂದರ್ಭದಲ್ಲಿ ಪಿಂಕ್ ವಾಟ್ಸಾಪ್ ಇನ್‌ಸ್ಟಾಲ್ ಮಾಡಿಕೊಳ್ಳುವುದಕ್ಕೆ ಲಿಂಕ್‌ಗಳು ಗೋಚರಿಸುತ್ತವೆ.

ಅಂತಹ ಸಂದರ್ಭದಲ್ಲಿ ಈ ಲಿಂಕ್ ಬಳಸಿ ಅಪ್ಲಿಕೇಶನ್ ಒಂದು ವೇಳೆ ಇನ್‌ಸ್ಟಾಲ್ ಮಾಡಿಕೊಂಡರೆ ಹ್ಯಾಕರ್ಸ್ಗಳು ನಿಮ್ಮ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳಾದ ಫೋಟೋಗಳು, ಕಾಂಟಾಕ್ಟ್ ಗಳು, ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್, ಎಸ್‌ಎಂಎಸ್‌ಗಳನ್ನು ಸುಲಭವಾಗಿ ಕದಿಯುವ ಸಾಧ್ಯತೆ ಇದೆ.

ಆದ್ದರಿಂದ ಇದೊಂದು ಫೇಕ್ ಅಪ್ಲಿಕೇಶನ್ ಆಗಿದ್ದು, ಇದನ್ನು ಬಳಕೆದಾರರು ತಮ್ಮ ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡದಂತೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ.

ಈಗಾಗಲೇ ಯಾರಾದರೂ ಪಿಂಕ್ ವಾಟ್ಸಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ತಕ್ಷಣವೇ ಅನ್ ಇನ್‌ಸ್ಟಾಲ್ ಮಾಡಿಕೊಳ್ಳಿ, ಜೊತೆಗೆ ಎಲ್ಲಾ ವಾಟ್ಸಾಪ್ ವೆಬ್ ಸಾಧನಗಳನ್ನು ಅನ್‌ಲಿಂಕ್ ಮಾಡಿ, ಸೆಟ್ಟಿಂಗ್‌ಗಳಿಂದ ಬ್ರೌಸರ್ ಸಂಗ್ರಹವನ್ನು ತೆರವುಗೊಳಿಸಿ, ಎಲ್ಲಾ ಅಪ್ಲಿಕೇಶನ್‌ಗಳಿಗೆ ಅನುಮತಿಯನ್ನು ಪರಿಶೀಲಿಸಿ. ಇಲ್ಲವಾದಲ್ಲಿ ಹ್ಯಾಕರ್‌ಗಳು ಸುಲಭವಾಗಿ ನಮ್ಮ ಮೊಬೈಲ್‌ನಲ್ಲಿರುವ ಹಲವು ಮಾಹಿತಿಗಳನ್ನು ಬಳಸಿಕೊಂಡು ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಗದಗ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಸಾರ್ವಜನಿಕರಿಗೆ ವಂಚನೆ ಎಸಗುವ ಅನೇಕ ಅಪ್ಲಿಕೇಶನ್‌ಗಳ ಬಗ್ಗೆ ಜಾಗೃತಿ, ಕಳೆದುಹೋದ ಮೊಬೈಲ್ ಮರಳಿ ಪಡೆದುಕೊಳ್ಳುವುದಕ್ಕೆ ತಂತ್ರಾಂಶವೂ ಸೇರಿದಂತೆ ಜನಸ್ನೇಹಿ ಪೊಲೀಸ್ ಸೇವೆಯನ್ನು ನೀಡುವುದಕ್ಕೆ ಮುಂದಾಗಿದ್ದು, ಕಚೇರಿಯ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಕಾಲಕಾಲಕ್ಕೆ ಸಾರ್ವಜನಿಕರಿಗೆ ಅನೇಕ ಉಪಯುಕ್ತತೆಗಳ ಮಾಹಿತಿಯನ್ನು ನೀಡುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ.

`ಪಿಂಕ್ ವಾಟ್ಸಪ್’ ಇದೊಂದು ನಕಲಿ ಆ್ಯಪ್ ಆಗಿದ್ದು, ಯಾರೂ ಇದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಾರದು. ಒಂದು ವೇಳೆ ಮಾಡಿಕೊಂಡಿದ್ದರೆ, ತಕ್ಷಣ ಅನ್‌ಇನ್‌ಸ್ಟಾಲ್ ಮಾಡಬೇಕು. ಬೇರೆ ಅಪ್ಲಿಕೇಶನ್ ವೀಕ್ಷಿಸುತ್ತಿರುವಾಗಲೂ ಸಹ ಈ ಆ್ಯಪ್‌ಗೆ ಸಂಬಂಧಿಸಿದಂತೆ ಬರುವ ಲಿಂಕ್‌ಗಳನ್ನು ಬಳಸಬಾರದು. ಇದರಿಂದ ಮೊಬೈಲ್ ಹ್ಯಾಕರ್‌ಗಳು ನಿಮ್ಮ ಮೊಬೈಲ್‌ನಲ್ಲಿಯ ಮಾಹಿತಿ ಕದಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸಬೇಕು.

ಬಿ.ಎಸ್.ನೇಮಗೌಡ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಗದಗ

Spread the love

LEAVE A REPLY

Please enter your comment!
Please enter your name here