ಶಿರಹಟ್ಟಿ ಸಬ್ ರಜಿಸ್ಟಾರ್ ಕಚೇರಿ ದಲ್ಲಾಳಿಗಳ ಹಾಟ್‌ಸ್ಪಾಟ್…..?

0
Spread the love

  • ಶಿಸ್ತು ಕ್ರಮ ಜರುಗಿಸುವಂತೆ ಪ್ರಭಾರಿ ಸಬ್ ರಿಜಿಸ್ಟಾರ್‌ರಿಂದ ತಹಸೀಲ್ದಾರರಿಗೆ ಮನವಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

Advertisement

ಆಡಳಿತದಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆಯೊಂದಿಗೆ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ನೋಂದಣಿ ಪ್ರಕ್ರಿಯೆಗಳು ಮುಗಿದು ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಸರಕಾರ ಇತ್ತೀಚೆಗೆ ನೊಂದಣಿ ಇಲಾಖೆಯಲ್ಲಿ ಆನ್‌ಲೈನ್ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ.

ಆದರೆ ಶಿರಹಟ್ಟಿ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಇತ್ತೀಚಿನ ದಿನಗಳಲ್ಲಿ ದಲ್ಲಾಳಿಗಳ ಹಾಟ್‌ಸ್ಪಾಟ್ ಆಗಿ ಮಾರ್ಪಡುತ್ತಿರುವ ಬಗ್ಗೆ ಸ್ವತಃ ಪ್ರಭಾರಿ ಉಪನೋಂದಣಾಧಿಕಾರಿಗಳೇ ಇಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತಹಸೀಲ್ದಾರರಿಗೆ ಮನವಿ ಮಾಡಿಕೊಂಡಿದ್ದಾರೆ.

ಶಿರಹಟ್ಟಿ ಕಚೇರಿ ಅಧೀನದಲ್ಲಿ ಬರುವ ಜಿಲ್ಲಾ ದಸ್ತು ಬರಹಗಾರರ ಕೈ ಕೆಳಗೆ ಕೆಲಸ ಮಾಡುತ್ತಿರುವ ಖಾಸಗಿ ವ್ಯಕ್ತಿಗಳು ದಲ್ಲಾಳಿಗಳಂತೆ ಕೆಲಸ ಮಾಡುತ್ತಿದ್ದು, ಇದರಿಂದ ಜನತೆ ಬೇಸತ್ತು ಹೋಗಿದ್ದಾರೆ. ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಿಂದ ಕಚೇರಿಯ ಹೆಸರಿಗೆ ಧಕ್ಕೆ ಉಂಟುಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ರೈತರಿಂದ ೫೦೦, ೧೦೦೦, ೧೫೦೦ ರೂ.ಗಳಂತೆ ಉಪ ನೋಂದಣಾಧಿಕಾರಿಗೆ ಕೊಡಬೇಕೆಂದು ಹೇಳಿ ಹಣ ವಸೂಲಿ ಮಾಡುತ್ತಿದ್ದಾರೆ.

ಮುದ್ರಾಂಕ ಕಾಯ್ದೆ ೧೯೫೭ರ ಪ್ರಕಾರ ಇವರ ಮೇಲೆ ಶಿಸ್ತು ಕ್ರಮ ಜಾರಿಗೊಳಿಸಿ ದಲ್ಲಾಳಿ ಹಾವಳಿ ತಪ್ಪಿಸಬೇಕೆಂದು ಮನವಿ ಮೂಲಕ ಶಿರಹಟ್ಟಿ ಪ್ರಭಾರಿ ಸಬ್ ರಜಿಸ್ಟಾರ್ ವಿನಂತಿಸಿದ್ದಾರೆ.

ಶಿರಹಟ್ಟಿ ಸಬ್ ರಜಿಸ್ಟಾರ್ ಕಚೇರಿಗೆ ನಿತ್ಯವೂ ಗ್ರಾಮೀಣ ಪ್ರದೇಶಗಳಿಂದ ಸಾರ್ವಜನಿಕರು ವಿವಿಧ ಕೆಲಸ-ಕಾರ್ಯಗಳಿಗೆ ಆಗಮಿಸುತ್ತಾರೆ. ಕಚೇರಿಯಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಜನತೆಯನ್ನು ನಂಬಿಸಿ ಅವರಿಂದ ಒಂದೊಂದು ಕಾಗದಕ್ಕೆ ಇಂತಿಷ್ಟು ಹಣ ಎಂದು ನಿಗದಿ ಮಾಡಿಕೊಂಡು ಸರಕಾರ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದಾರೆ.

ಅಮಾಯಕರನ್ನು ಸತಾಯಿಸುವುದು ಮತ್ತು ಕಚೇರಿಯ ಸಿಬ್ಬಂದಿಗಳು ಸಹ ದಲ್ಲಾಳಿಗಳೊಂದಿಗೆ ಸಂಪರ್ಕ ಹೊಂದಿ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಬಗ್ಗೆ ಸಹ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಇಲ್ಲಿಯ ಆಡಳಿತ ವ್ಯವಸ್ಥೆಗೆ ಹಿಡಿಶಾಪವನ್ನು ಹಾಕುತ್ತಾ ದುಡ್ಡು ಕೊಟ್ಟಾದರೂ ಸರಿ ತಮ್ಮ ಕೆಲಸವನ್ನು ಮುಗಿಸಿಕೊಂಡು ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕಚೇರಿಯ ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶ ಸಾಧಿಸುತ್ತಿರುವ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಹಾಗೂ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಶಿರಹಟ್ಟಿಯ ಸಬ್ ರಜಿಸ್ಟಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ, ದಲ್ಲಾಳಿಗಳ ಬಗ್ಗೆ ಗಮನಹರಿಸಿ, ಸಾರ್ವಜನಿಕರಿಗೆ ಇಲ್ಲಿ ಪಾರದರ್ಶಕವಾಗಿ ಮತ್ತು ತ್ವರಿತಗತಿಯಲ್ಲಿ ಕೆಲಸ-ಕಾರ್ಯಗಳು ನಡೆಯುವಂತೆ ಕ್ರಮ ಕೈಕೊಳ್ಳಬೇಕೆಂಬ ಒತ್ತಾಯಗಳು ಕೇಳಿಬಂದಿವೆ.

ಲೈಸನ್ಸ್ ಹೋಲ್ಡರ್‌ಗಳಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗುವುದು. ತಪ್ಪು ಮಾಡಿದ್ದು ಕಂಡು ಬಂದಲ್ಲಿ ಅಂಥವರ ಲೈಸನ್ಸ್ ರದ್ದುಪಡಿಸಲು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.

-ಅನಿಲ ಬಡಿಗೇರ. ತಹಸೀಲ್ದಾರ. ಶಿರಹಟ್ಟಿ

Spread the love

LEAVE A REPLY

Please enter your comment!
Please enter your name here