ಶವ ಹೊರ ತಗೆಯಲು ಹರಸಾಹಸ....
ವಿಜಯಸಾಕ್ಷಿ ಸುದ್ದಿ, ಗದಗ
ಸಾರಿಗೆ ಸಂಸ್ಥೆಯ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ನಂತರ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಮುಂಜಾನೆ ಜರುಗಿದೆ.
ಶಿಕ್ಷಣ ಇಲಾಖೆಯಲ್ಲಿ ಜೆಡಿಯಾಗಿ ನಿವೃತ್ತಿ ಹೊಂದಿದ್ದ ಹೊಸಪೇಟೆಯ ನಿವಾಸಿಗಳಾದ ಬಾಲರಾಜ್ (65) ಹಾಗೂ ಮಗ ಉಪನ್ಯಾಸಕ ವಿನಯ್ (28) ಸ್ಥಳದಲ್ಲೇ ಮೃತಪಟ್ಟ ದುರ್ಧೈವಿಗಳು ಎಂದು ಗುರುತಿಸಲಾಗಿದೆ.
ಗದಗ ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಲಕ್ಕುಂಡಿ ಗ್ರಾಮದ ಕೂಗಳತೆಯಲ್ಲಿ ಈ ಅಪಘಾತ ನಡೆದಿದೆ.
ಬಸ್ ಗದಗನಿಂದ ಲಕ್ಕುಂಡಿ ಮಾರ್ಗವಾಗಿ ಕೊಪ್ಪಳಕ್ಕೆ ಹೊರಟಿತ್ತು ಎನ್ನಲಾಗಿದೆ. ಕಾರು ಹೊಸಪೇಟೆಯಿಂದ ಹುಬ್ಬಳ್ಳಿ ಕಡೆ ಹೊರಟಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದ ನಂತರ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಿಂದ ಶವ ಹೊರಗಡೆ ತೆಗೆಯಲು ಹರಸಾಹಸ ಪಡಬೇಕಾಯಿತು.
ಗಾಯಗೊಂಡ ಪ್ರಯಾಣಿಕರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.