ಮಡಿಕೇರಿ;- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು, ರಾಜ್ಯದಲ್ಲಿ ವಿದ್ಯುತ್‌ನ ಕೃತಕ ಅಭಾವ ಸೃಷ್ಟಿಯಾಗಿದೆ ಎಂಬ ಆರೋಪ ಸುಳ್ಳು ಎಂದಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್‌ನ ಕೃತಕ ಅಭಾವ ಸೃಷ್ಟಿಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್‌ನ ಬಳಕೆ ಹೆಚ್ಚಾಗಿರುವುದರಿಂದ ಕೊರತೆ ಎದುರಾಗಿದೆ ಎಂದರು.
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಮಿಷನ್‌ಗಾಗಿ ವಿದ್ಯುತ್ ಖರೀದಿಸಲು ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರದ ಗ್ರಿಡ್ ಮೂಲಕವೇ ಕೊರತೆಯಾದ ವಿದ್ಯುತ್‌ನ್ನು ಖರೀದಿಸುತ್ತಿದೆ. ಕೇಂದ್ರದ ಗ್ರಿಡ್ ಕಮಿಷನ್ ಕೊಡಲು ಸಾಧ್ಯವೇ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯಸರ್ಕಾರ ಇದುವರೆಗೂ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಿಲ್ಲ. ಹಾಗಿದ್ದ ಮೇಲೆ ಕಮಿಷನ್ ಪಡೆಯುವ ಪ‍್ರಶ್ನೆಯೇ ಎದುರಾಗುವುದಿಲ್ಲ. ಇದರ ಕನಿಷ್ಠ ಜ್ಞಾನವೂ ಕುಮಾರಸ್ವಾಮಿ ಅವರಿಗೆ ಇಲ್ಲ ಎಂದು ಹೇಳಿದರು.
ಆದರೆ, ಬಿಜೆಪಿ ಸರ್ಕಾರವಿದ್ದಾಗ 2022ರಲ್ಲೇ ವಿದ್ಯುತ್ ತಯಾರಿಸುವ ಸಾಮರ್ಥ್ಯವಿದ್ದರೂ ಖಾಸಗಿ ಕಂಪನಿಯಿಂದ ಸರ್ಕಾರ ವಿದ್ಯುತ್ ಖರೀದಿಸಿತ್ತು ಎಂದು ಅಂದಿನ ಕೆಪಿಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಪತ್ರ ಬರೆದಿದ್ದರು. ಖಾಸಗಿ ಕಂಪನಿಯಿಂದ ವಿದ್ಯುತ್ ಖರೀದಿಸಿದ್ದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಸ್ಪಷ್ಟಪಡಿಸಿದರು.