ಎಚ್‌ಕೆ ಪಾಟೀಲರಿಗೆ ಡಬಲ್ ಧಮಾಕಾ: ಹೈಕಮಾಂಡ್ ಕೊಟ್ಟ ಗಿಫ್ಟ್

0
Spread the love

ಕಾರ್ಯಕಾರಿ ಸಮಿತಿ ಸದಸ್ಯತ್ವದ ಜೊತೆಗೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ

Advertisement

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಶುಕ್ರವಾರ ರಾಷ್ಟ್ರೀಯ ಕಾಂಗ್ರೆಸ್ ಸಂಘಟನಾತ್ಮಕವಾಗಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಇತ್ತೀಚೆಗೆ ಬಂಡಾಯವೆದ್ದಿದ್ದ ಹಲವರನ್ನು ಉಳಿಸಿಕೊಂಡಿದೆ. ಕೆಲವರನ್ನು ಕೈಬಿಟ್ಟಿದೆ. ರಾಜ್ಯ ಕಾಂಗ್ರೆಸ್ ಪಾಲಿಗೆ ಬಂಪರ್ ಬಹುಮಾನವೇ ಸಿಕ್ಕಿದ್ದು ಐವರಿಗೆ ಅವಕಾಶ ದೊರೆತಿದೆ.
ಅದೆಲ್ಲಕ್ಕೂ ಮುಖ್ಯವಾಗಿ ಗದಗ ಶಾಸಕ ಮತ್ತು ಮಾಜಿ ಸಚಿವ ಎಚ್.ಕೆ. ಪಾಟೀಲರಿಗೆ ಎರಡು ಪ್ರಮುಖ ಹುದ್ದೆಗಳು ದೊರಕಿವೆ. ಇದನ್ನು ಅವರ ನಿರಂತರ ಕ್ರಿಯಾಶೀಲತೆ ಮತ್ತು ಪಕ್ಷನಿಷ್ಠೆಯಲ್ಲಿ ವಿಶ್ವಾಸವಿಟ್ಟು ಹೈಕಮಾಂಡ್ ನೀಡಿದ ಕಾಣಿಕೆ, ಬಹುಮಾನ ಎನ್ನಬಹುದಾದರೂ, ಇವತ್ತು ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಹಿನ್ನಡೆಯನ್ನು ಗಮನಕ್ಕೆ ತೆಗೆದುಕೊಂಡರೆ, ಹೆಚ್ಚಿನ ಜವಾಬ್ದಾರಿ ಮತ್ತು ಸವಾಲಿನ ಕೆಲಸವನ್ನು ಹೈಕಮಾಂಡ್ ಎಚ್.ಕೆ. ಪಾಟೀಲರ ಹೆಗಲಿಗೆ ಏರಿಸಿದೆ ಎನ್ನುವುದೇ ಸೂಕ್ತ.

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲೂ ಅವರ ಹೆಸರು ಕೇಳಿ ಬಂದಿತ್ತು. ಅಗ್ರೆಸಿವ್ ನಾಯಕನ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್‌ಗೆ ಆ ಜವಾಬ್ದಾರಿ ನೀಡಿತು. ಸರ್ಕಾರವನ್ನು ಎಚ್ಚರಿಸುವ ಕೆಲಸದಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರನ್ನು ಬಿಟ್ಟರೆ ಎಚ್.ಕೆ ಪಾಟೀಲರೆ ಕಾಣುವುದು. ಪಿಪಿಇ ಕಿಟ್ ಕುರಿತಾಗಲಿ, ರಾಜ್ಯದಲ್ಲಿ ಏರುತ್ತಿರುವ ಕೊವಿಡ್ ಮರಣ ಪ್ರಮಾಣದ ವಿಷಯವಾಗಲಿ ನಿಖರ ಮಾಹಿತಿಯೊಂದಿಗೆ ಎಚ್.ಕೆ. ಪಾಟೀಲ್ ಸಕಾರಣಿಕ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಸಂಘಟನೆಯೊಂದಿಗೆ ಗುರುತಿಸಿಕೊಂಡ ಎಚ್‌ಕೆ ಅವರು ತಮ್ಮ ತಂದೆ ಕೆ.ಎಚ್ ಪಾಟೀಲರಂತೆ ದಾಢಸಿ ರಾಜಕಾರಣವನ್ನು ಮೈಗೂಡಿಸಿಕೊಳ್ಳಲಿಲ್ಲ. ಬಹುಶ: ಅವರು ಪದವೀಧರ ಕ್ಷೇತ್ರದ ಮೂಲಕವೇ ಹೆಚ್ಚು ಸಲ ಶಾಸಕರಾಗಿದ್ದೂ ಅದಕ್ಕೆ ಕಾರಣವಿರಬಹುದು.

ನೇರ ಚುನಾವಣೆಯಿಂದ ದಶಕಗಳ ಕಾಲ ದೂರವಿದ್ದ ಅವರು ಮೊದಲ ಸಲ ಗದಗ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದಾಗ ಸೋಲಬೇಕಾಯಿತು. 2013 ಮತ್ತು 2018 ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದರು. ಕಳೆದ ಚುನಾವಣೆಯಲ್ಲೂ ಎಚ್‌ಕೆ ಅವರಿಗೆ ಸಣ್ಣ ಅಂತರದ ಗೆಲುವಷ್ಟೇ ಸಿಕ್ಕಿತ್ತು.
ಈಗ ಜನರ ಸಂಪರ್ಕದಲ್ಲಿರುವ ರಾಜಕಾರಣಕ್ಕೆ ಅವರೂ ಹೊಂದಿಕೊಂಡಿದ್ದಾರೆ. ಸಂವಿಧಾನ ಮತ್ತು ಕಾನೂನಿನ ಬಗ್ಗೆ ಇರುವ ಜ್ಞಾನ, ನೀರಾವರಿ ಯೋಜನೆಗಳ ಬಗ್ಗೆ ಇರುವ ಮಾಹಿತಿ ಮತ್ತು ಗ್ರಾಮೀಣಾಭಿವೃದ್ಧಿಯ ಬಗ್ಗೆ ಅವರಲ್ಲಿರುವ ಗಾಂಧಿಪ್ರಣೀತ ವಿಚಾರಗಳನ್ನು ಬೇರೆ ರಾಜಕಾರಣಿಗಳಲ್ಲಿ ಕಾಣುವುದು ಅಪರೂಪ.

ಸಿದ್ದರಾಮಯ್ಯ ಆರ್ಥಿಕ ಸ್ಥಿತಿ ಕುರಿತು ಎಷ್ಟು ಅಧಿಕಾರಯುತವಾಗಿ ಮಾತನಾಡಬಲ್ಲರೊ ಅಷ್ಟೇ ಅಧಿಕಾರಯುತವಾಗಿ ಎಚ್‌ಕೆ ನೀರಾವರಿ, ಸದನದ ಕಲಾಪ ನಿಯಮಗಳು ಮತ್ತು ಪಂಚಾಯತ್ ರಾಜ್ ಮಹತ್ವದ ಬಗ್ಗೆ ಮಾತನಾಡಬಲ್ಲರು.
ಸಿದ್ದರಾಮಯ್ಯ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅವರು ಮಾಡಿದ ಕೆಲವು ಸಾಧನೆಗಳು ದೆಹಲಿಯಲ್ಲೂ ಮೆಚ್ಚುಗೆ ಗಳಿಸಿದವು. ಎರಡು ಸಲ ಕೇಂದ್ರ ಸರ್ಕಾರದ ಪ್ರಶಸ್ತಿಗೆ ಭಾಜನರಾಗುವ ಮೂಲಕ ಹೈಕಮಾಂಡ್ ನಜರಿನಲ್ಲಿ ವಿಶೇಷ ಗೌರವ ಪಡೆದರು.

ಈಗ ಅವರಿಗೆ ಮಹಾರಾಷ್ಟ್ರ ಉಸ್ತುವಾರಿಯಂತಹ ಸವಾಲಿನ ಕೆಲಸವನ್ನು ನೀಡಲಾಗಿದೆ. ಪಕ್ಷದ ಮಹತ್ತರ ನಿರ್ಣಯಗಳನ್ನು ಕೈಗೊಳ್ಳುವ ಕಾರ್ಯಕಾರಿ ಸಮಿತಿಯಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ. ಅದು ಈ ಭಾಗಕ್ಕೂ ಸಂದ ಗೌರವವೂ ಆಗಿದೆ.

ಮಹಾರಾಷ್ಟ್ರದಲ್ಲಿ ಮುಳ್ಳಿನ ಹಾದಿ

ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರನೆಲವಾಗಿದ್ದ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಈಗ ಮೈತ್ರಿ ರಾಜಕಾರಣ ಆಶ್ರಯಿಸದೇ ವಿಧಿಯಿಲ್ಲ. ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಧ್ರುವೀಕರಣ ಮಾಡಿರುವ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ತಮ್ಮ ವೋಟ್ ಶೇರ್ ಹೆಚ್ಚಿಸಿಕೊಳ್ಳುತ್ತ ಬಂದಿವೆ. ಶರದ್ ಪವಾರ್ ಕಾಂಗ್ರೆಸ್ ತೊರೆದು ಎನ್‌ಸಿಪಿ ಕಟ್ಟಿದ ನಂತರ ಕಾಂಗ್ರೆಸ್ ಮತಬ್ಯಾಂಕ್ ಛಿದ್ರಗೊಂಡಿದೆ. ಈಗ ಎನ್‌ಸಿಪಿ ಜೊತೆ ಮೈತ್ರಿ ರಾಜಕಾರಣ ಮಾಡಲೇಬೇಕು. ಹಿಂದೆ ಸಿದ್ಧಾಂತದ ಕಾರಣಕ್ಕೆ ಶಿವಸೇನೆಯನ್ನು ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್ ಈಗ ಅನಿವಾರ್ಯವಾಗಿ ಅದರ ನೇತೃತ್ವದ ಸರ್ಕಾರದಲ್ಲಿ ಭಾಗಿಯಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಬಾಳಾಸಾಬ್ ಥೋರಟ್, ಅಶೋಕ್ ಚವ್ಹಾಣ್ ಗುಂಪುಗಳಿವೆ. ಕರ್ನಾಟಕದ ಎರಡು ಪಟ್ಟು ಜನಸಂಖ್ಯೆ ಇರುವ ಅಲ್ಲಿ ಪಕ್ಷದ ಉಸ್ತುವಾರಿ ಕೆಲಸ ಮಾಡುವುದು ಸವಾಲಿನ ಸಂಗತಿಯೇ ಆಗಿದೆ.

‘ಹೈಕಮಾಂಡ್ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುವೆ. ಮಹಾರಾಷ್ಟ್ರದಲ್ಲಿ ಮತ್ತೆ ಕಾಂಗ್ರೆಸ್‌ನ ಗತವೈಭವದ ದಿನಗಳು ಮರುಕಳಿಸುವಂತಾಗಲು ಶ್ರಮಿಸುವೆ.

-ಎಚ್.ಕೆ. ಪಾಟೀಲ್. ಶಾಸಕರು, ಗದಗ


Spread the love

LEAVE A REPLY

Please enter your comment!
Please enter your name here