ಪ್ರೀತಿಗೆ ಮನೆಯವರ ವಿರೋಧ: ಬೆಂಕಿ ಹಚ್ಚಿಕೊಂಡು ವಿವಾಹಿತ ಮಹಿಳೆ, ಪ್ರೇಮಿ ಆತ್ಮಹತ್ಯೆ

0
Spread the love

ಬೆಂಗಳೂರು: ತಮ್ಮ ಪ್ರೇಮಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರೆಂದು ಬೆಂಕಿ ಹಚ್ಚಿಕೊಂಡು ಪ್ರೇಮಿಯೊಂದಿಗೆ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ದೊಡ್ಡಗುಬ್ಬಿ ನಿವಾಸದ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.

Advertisement

ಸೌಮಿನಿ ದಾಸ್ (20), ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಫ್ಲ್ಯಾಟ್‌ನಲ್ಲಿ ಬೆಂಕಿ ಕಂಡು ಅಪಾರ್ಟ್ಮೆಂಟ್ ನಿವಾಸಿಗಳು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬೆಂಕಿಯಲ್ಲಿ ಬೆಂದು ಸೌಮಿನಿ ಕೊನೆಯುಸಿರೆಳೆದಿದ್ದಾಳೆ. ಭಾಗಶಃ ಸುಟ್ಟು ಹೋಗಿದ್ದ ಅಬ್ರಾಹಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಬ್ರಾಹಂ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಸೌಮಿನಿ ದಾಸ್ ಪಶ್ಚಿಮ ಬಂಗಾಳ ರಾಜ್ಯದವಳಾಗಿದ್ದು, ಕರಿಯಮ್ಮ ಆಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ ಓದುತ್ತಿದ್ದಳು.

ಎರಡು ವರ್ಷಗಳ ಹಿಂದೆಯೇ ಆಕೆಗೆ ವಿವಾಹವಾಗಿತ್ತು. ಇನ್ನು ನರ್ಸ್ ಸರ್ವೀಸ್ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂಗೆ ಕೆಲ ತಿಂಗಳ ಹಿಂದೆ ಸೌಮಿನಿಯ ಪರಿಚಯವಾಗಿತ್ತು. ರಜೆ ಇದ್ದಂತಹ ಸಂದರ್ಭದಲ್ಲಿ ಮತ್ತು ಬಿಡುವಿನಲ್ಲಿ ಸೌಮಿನಿ ಅಬ್ರಾಹಂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಳು.

3 ತಿಂಗಳ ಹಿಂದೆ ಅಬ್ರಾಹಂನನ್ನು ತನ್ನ ಪತಿಗೆ ಸೌಮಿನಿ ಪರಿಚಯ ಮಾಡಿಸಿದ್ದಳು. ದಿನಗಳು ಕಳೆಯುತ್ತಾ ಇವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು.

ಕೆಲ ದಿನಗಳ ಹಿಂದೆ ಸೌಮಿನಿ ಕೋಲ್ಕತ್ತಾಗೆ ಹೋಗಿದ್ದಳು. ಇದಾದ ಬಳಿಕ ಬೆಂಗಳೂರಿಗೆ ಬಂದಿದ್ದಳು. ನಂತರ ಇಬ್ಬರೂ 14 ದಿನಕ್ಕೆ ಫ್ಲ್ಯಾಟ್‌ವೊಂದನ್ನು ಬಾಡಿಗೆ ಪಡೆದಿದ್ದರು. ಬಳಿಕ ಸೌಮಿನಿ ಪ್ರೇಮದ ವಿಚಾರವನ್ನು ತನ್ನ ಪತಿಗೆ ತಿಳಿಸಿದ್ದಾಳೆ.

ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸೌಮಿನಿ ಹಾಗೂ ಅಬ್ರಾಹಂ ಇಬ್ಬರೂ ಸಾಯಲು ತೀರ್ಮಾನ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ವೇಳೆಗೆ ಬಾಡಿಗೆ ಪಡೆದಿದ್ದ ಅಪಾರ್ಟ್ಮೆಂಟ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 


Spread the love

LEAVE A REPLY

Please enter your comment!
Please enter your name here