ಬೆಂಗಳೂರು: ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 126 ಕೋಟಿ ರೂ. ಅನುದಾನವನ್ನು ನಮ್ಮ ಸರ್ಕಾರ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದ ಕಾಮಗಾರಿಗಳನ್ನು ರದ್ದುಪಡಿಸಿ, 126 ಕೋಟಿ ಹಣವನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಸತ್ಯಾಗ್ರಹ ಮಾಡಿ ಮನವಿ ಮಾಡಿದರೂ ಸಹ ಈವರೆಗೆ ಕ್ಷೇತ್ರದ 126 ಕೋಟಿ ಅನುದಾನ ನನಗೆ ಹಿಂತಿರುಗಿಸಿಲ್ಲ ಎಂದು ಶಾಸಕ ಮುನಿರತ್ನ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನನ್ನ ಬಳಿ ಅನುದಾನ ಹಿಂತಿರುಗಿಸಿದ್ದಾರ ಎಂದು ಕೇಳಿದ ಸಂದರ್ಭ ನಾನು ಇಲ್ಲ ಎಂದು ಹೇಳಿದ್ದೆ. ನಾನು ಕಾಮಗಾರಿಗಳನ್ನು ವೀಕ್ಷಣೆ ಮಾಡುತ್ತೇನೆ. ಕಾಮಗಾರಿ ವೀಕ್ಷಣೆಗೆ ದಿನಾಂಕ ನಿಗದಿ ಮಾಡುವಂತೆ ಯಡಿಯೂರಪ್ಪ ಸೂಚಿಸಿದ್ದರು. ಅದರ ಪ್ರಕಾರ ಇವತ್ತು ವೀಕ್ಷಣೆ ಮಾಡಿದ್ದಾರೆ ಎಂದರು.
ನಮ್ಮ ಕ್ಷೇತ್ರದ ಅನುದಾನ ಹಿಂತಿರುಗಿಸುವಂತೆ ಸಂಸದ ಡಿಕೆ ಸುರೇಶ್ ಅವರಿಗೆ ಮನವಿ ಮಾಡುತ್ತೇನೆ. ಯಾವ ಕಾಮಗಾರಿಗೆ ನಾವು ಅನುದಾನ ತಂದಿದ್ದೆವೋ ಅದನ್ನು ಮತ್ತೆ ನಮಗೆ ಕೊಡಿ. ಇದು ನಿಮ್ಮ ಲೋಕಸಭಾ ವ್ಯಾಪ್ತಿಗೆ ಬರುವಂತಹ ಅನುದಾನ. ರಾಜಕೀಯದ ಬಗ್ಗೆ ನಾನು ಮಾತನಾಡಲ್ಲ. ವೈಯಕ್ತಿಕವಾಗಿ ನಾನು ಯಾವುದಕ್ಕೂ ಬರಲ್ಲ ಎಂದು ಹೇಳಿದರು.