ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇವತ್ತು ಶುಕ್ರವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ನಡೆಯಲಿದ್ದು, ಸಂಪುಟ ವಿಸ್ತರಣೆ ಮಾಡುವುದೋ ಅಥವಾ ಪುನಾರಚನೆ ಮಾಡುವುದೋ ಎಂಬುದು ನಿರ್ಧಾರವಾಗಲಿದೆ ಎನ್ನಲಾಗಿದೆ.
ಗುರುವಾರವೇ ದೆಹಲಿ ತಲುಪಿರುವ ಯಡಿಯೂರಪ್ಪ ಸಂಪುಟ ಪುನಾರಚನೆಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಕೆಲವರನ್ನು ಸಂಪುಟದಿಂದ ಕೈಬಿಟ್ಟು 8 ಜನರನ್ನು ಸೇರ್ಪಡೆ ಮಾಡಿಕೊಳ್ಳುವುದು ಅವರ ಉದ್ದೇಶ. ಇದಕ್ಕೆ ಹೈಕಮಾಂಡ್ ಒಪ್ಪದಿದ್ದರೆ ವಿಸ್ತರಣೆಗಾದರೂ ಅವಕಾಶ ಪಡೆಯುವುದು ಅವರ ಗುರಿ.
ಗುರುವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅಮಿತ್ ಶಾ ಭೇಟಿ ಕಷ್ಟವಿದೆ. ಈಗ ಚಡ್ಡಾ ಮತ್ತು ರಾಜನಾಥ್ ಸಿಂಗ್ ಮೂಲಕವೇ ಅಮಿತ್ ಶಾರನ್ನು ಒಪ್ಪಿಸುವ ಲೆಕ್ಕದಲ್ಲಿ ಯಡಿಯೂರಪ್ಪ ಇದ್ದಾರೆ.
ಈಗಾಗಲೇ ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮತ್ತು ಎಚ್. ವಿಶ್ವನಾಥ್ ದೆಹಲಿಯಲ್ಲಿದ್ದಾರೆ. ಸದ್ಯ ಪರಿಷತ್ತಿನಿಂದ ಎಂಟಿಬಿ ನಾಗರಾಜ್, ಆರ್ ಶಂಕರ್, ಎಚ್ ವಿಶ್ವನಾಥ್, ವಿಧಾನಸಭೆಯಿಂದ ಉಮೇಶ ಕತ್ತಿ, ಎಸ್. ಅಂಗಾರ, ಜಿಎಚ್ ತಿಪ್ಪಾರೆಡ್ಡಿ, ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಮುಂತಾದವರು ಸಚಿವ ಸ್ಥಾನದ ಆಕಾಂಕ್ಷಿಗಳು.
ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆಕಾಂಕ್ಷಿಯೇ. ಅಂದಂತೆ ಖಾಲಿ ಇರುವುದು ಐದೇ ಸ್ಥಾನಗಳು. ಪುನಾರಚನೆಯಾದರಷ್ಟೇ ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ.
ಈ ಎಲ್ಲದರ ನಡುವೆ ವಿಸ್ತರಣೆ ಮತ್ತು ಪುನಾರಚನೆ ಎರಡೂ ಸದ್ಯಕ್ಕೆ ಬೇಡ ಎಂದು ಹೈಕಮಾಂಡ್ ಹೇಳಿದರೂ ಹೇಳಬಹುದು!